ಸಾರಾಂಶ
ವಂತಿಗೆ ರದ್ದಾಗಿದ್ದರಿಂದ ಗ್ರಾಪಂಗಳಿಗೆ ಹಣ ಉಳಿತಾಯವಾಗಲಿದ್ದು ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜಲಜೀವನ್ ಮಿಷನ್ ಯೋಜನೆಗೆ ಗ್ರಾಪಂ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದುಪಡಿಸಲಾಗಿದ್ದು, ಈ ವಂತಿಗೆಯನ್ನು ಸರ್ಕಾರವೇ ಭರಿಸಲಿದ್ದು, ಆ ಮೂಲಕ ಗ್ರಾಪಂಗಳಿಗೆ ಹಣ ಉಳಿತಾಯವಾಗಿ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ₹.1.47 ಕೋಟಿ ಮತ್ತು ಕಾರಜೋಳ ಗ್ರಾಮದಲ್ಲಿ ₹1.22 ಕೋಟಿ ವೆಚ್ಚದಲ್ಲಿ ಮನೆಮನೆಗಳಿಗೆ ನೀರು ಪೂರೈಸುವ ಜೆಜೆಎಂ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಈ ವಿಷಯವಾಗಿ ನಾನು ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ಈ ಮುಂಚೆ ಗ್ರಾಪಂಗಳು 15ನೇ ಹಣಕಾಸಿನಡಿ ಮತ್ತು ಫಲಾನುಭವಿಗಳಿಂದ ಸಮುದಾಯ ವಂತಿಗೆಯನ್ನು ನೀಡಬೇಕಿತ್ತು. ಕೊರೋನಾ ವೇಳೆ ಸಂಕಷ್ಟದಲ್ಲಿದ್ದ ಗ್ರಾಮಸ್ಥರು ನಮಗೆ ನಳಗಳೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಗ್ರಾಪಂಗಳು ಕೂಡ 15ನೇ ಹಣಕಾಸಿನಡಿ ವಂತಿಗೆ ಪಾವತಿಸಿದ್ದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಹಲವಾರು ಗ್ರಾಪಂಗಳಿಗೆ ವಿದ್ಯುತ್ ಬಿಲ್ ಪಾವತಿಸಲೂ ಹಣವಿರಲಿಲ್ಲ. ಈ ಕುರಿತು ನಾನು ವಿಧಾನ ಪರಿಷತ್ತಿನ ಶಾಸಕರ ಜೊತೆಗೂಡಿ ಅಂದಿನ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆ. ಉತ್ತರ ಪ್ರದೇಶ ಮಾದರಿಯಂತೆ ರಾಜ್ಯ ಸರ್ಕಾರವೇ ಗ್ರಾಪಂಗಳ ಸಮುದಾಯ ವಂತಿಗೆಯ ಪಾಲನ್ನು ಭರಿಸಬೇಕು ಎಂದು ಮನವಿ ಮಾಡಿದ್ದೆ. ಅದಕ್ಕೆ ಸಚಿವರು ಒಪ್ಪಿದ್ದರು. ಅಲ್ಲದೇ, ಗ್ರಾಮ ಪಂಚಾಯಿತಿಗಳಿಂದ ಪಡೆಯಲಾಗಿದ್ದ ಸಮುದಾಯ ವಂತಿಗೆಯನ್ನು ಮರಳಿಸಿದ್ದರು ಎಂದರು.ವಿಜಯಪುರ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಬಹುತೇಕ ಪೂರ್ಣವಾಗುವ ಹಂತದಲ್ಲಿದ್ದು, ಕೆಲವು ಕಡೆ ಪೈಪುಗಳು ಮತ್ತು ನಳಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಯೋಜನೆ ಚಾಲ್ತಿಯಲ್ಲಿರುವ ಕೆಲವು ಕಡೆ ಜಲಮೂಲಗಳ ಸಮಸ್ಯೆ ಇದೆ. ಇದಕ್ಕಾಗಿಯೇ ಜಲಧಾರೆ ಯೋಜನೆಯಡಿ ಆಲಮಟ್ಟಿ ಜಲಾಶಯದಿಂದ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಈ ವೇಳೆ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಬಿ.ಡಿ.ಅಸಂಗಿ, ರಾಚಯ್ಯ ಮಠಪತಿ, ಪವನ ಆಸಂಗಿ, ಪರಶುರಾಮ ಮಲಘಾಣ, ಸುರೇಶ ಜಾಧವ, ಚಂದ್ರವ್ವ ಚಲವಾದಿ, ಪಾಂಡು ಜಾಧವ, ಪರಶು ವಾಲಿಕಾರ, ಕಾಂತು ಓಡಿಯರ, ಮಾಂತು ಯಾಳವಾರ, ಆನಂದ ಜಾಧವ, ಯಂಕಪ್ಪ ಉಪ್ಪಾರ, ಲಕ್ಷ್ಮಣ ಪೂಜಾರಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ, ರಾಜು ತಳೆವಾಡ ಮುಂತಾದವರು ಇದ್ದರು.