ಕ್ಯಾನ್ಸರ್ ಜನಜಾಗೃತಿ ಹೆಚ್ಚಾಗಲಿ: ಸಚಿವ ಮಂಕಾಳ ವೈದ್ಯ

| Published : Feb 06 2024, 01:36 AM IST

ಸಾರಾಂಶ

ಬದಲಾದ ಜೀವನ ಶೈಲಿ, ಕಲುಷಿತ ವಾತಾವರಣ, ಅನಾರೋಗ್ಯಕರ ಹವ್ಯಾಸ, ಜಾಗೃತಿಯ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿದೆ.

ಭಟ್ಕಳ:

ಎಲ್ಲೆಡೆ ಕ್ಯಾನ್ಸರ್ ರೋಗ ಹೆಚ್ಚುತ್ತಿದ್ದು, ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕದ ವತಿಯಿಂದ ಸೋಮವಾರ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಬದಲಾದ ಜೀವನ ಶೈಲಿ, ಕಲುಷಿತ ವಾತಾವರಣ, ಅನಾರೋಗ್ಯಕರ ಹವ್ಯಾಸ, ಜಾಗೃತಿಯ ಕೊರತೆ.. ಹೀಗೆ ವಿವಿಧ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿದೆ. ಇದು ಬರದಂತೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳಿಂದಲೇ ಅಭಿಯಾನ ಆರಂಭವಾಗಬೇಕು. ಕ್ಯಾನ್ಸರ್ ಬಂದರೆ ಸಾವು ಖಚಿತ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಇದು ತಪ್ಪು ಕಲ್ಪನೆ ಎಂದ ಅವರು, ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕ್ಯಾನ್ಸರ್ ರೋಗದಿಂದ ಮುಕ್ತರಾಗಿ ಸಹಜ ಜೀವನ ನಡೆಸುವ ಸಾವಿರಾರು ಮಂದಿ ನಮ್ಮ ಮಧ್ಯೆ ಇದ್ದಾರೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದರು.ಯುವಪೀಳಿಗೆ ದುಡ್ಡು ಕೊಟ್ಟು ರೋಗ ಪಡೆಯುತ್ತಿದ್ದಾರೆ. ಅತಿಯಾದ ತಂಬಾಕು ಸೇವನೆ, ಮದ್ಯಪಾನ, ಧೂಮಪಾನ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಮತ್ತು ಗಂಟಲು ಕ್ಯಾನ್ಸರ್, ಅನ್ನನಾಳ, ಹೊಟ್ಟೆ ಮತ್ತು ಕರುಳು ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಂತಹ ಘಟನೆಗಳು ನಡೆಯಬಾರದು ಎಂದರೆ ವಿದ್ಯಾರ್ಥಿ ದೆಸೆಯಿಂದಲೆ ಎಚ್ಚರ ವಹಿಸಬೇಕು. ಮಕ್ಕಳು ತಮ್ಮ ಹಿರಿಯರಿಗೂ ತಿಳಿ ಹೇಳಬೇಕು. ಬಡವರಿಗೆ ಕಾಯಿಲೆ ಬಂದರೆ ಅವರಿಗೆ ತೊಂದರೆ ಆಗಬಾರದು ಎನ್ನುವ ದಿಸೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕ್ಯಾನ್ಸರ್ ಆಸ್ಪತ್ರೆ ತೆರೆಯುವ ಉದ್ದೇಶ ಸರ್ಕಾರಕ್ಕಿದೆ ಎಂದು ಸಚಿವರು ಹೇಳಿದರು.ಪುರಸಭೆ ಸದಸ್ಯೆ ರಜನಿ ಪೈ ಮಾತನಾಡಿ, ದೇಹದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿರುವಾಗಲೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ನಡೆಸಿಕೊಳ್ಳಬೇಕು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ, ಆಸ್ಪತ್ರೆಯ ವೈದ್ಯಾಧಿಕಾರಿಗಳು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿದ್ದರು. ನಂತರ ಪಟ್ಟಣದಲ್ಲಿ ಕ್ಯಾನ್ಸರ್ ಜಾಗೃತಿ ಕುರಿತು ಜಾಥಾ ನಡೆಸಲಾಯಿತು.