ಸಾರಾಂಶ
ಕನ್ನಡಪ್ರಭ ವಾರ್ತೆ ಕುಕನೂರು
ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಾಗೂ ಉತ್ತಮ ಜೀವನ ಶೈಲಿ ಕ್ಯಾನ್ಸರ್ ತಡೆಯಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ಡಾ. ಸಿ.ಎಂ. ಹಿರೇಮಠ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹದ ಎಲ್ಲ ಅಂಗಾಂಗಗಳಿಗೂ ಕ್ಯಾನ್ಸರ್ ಬರುತ್ತದೆ. ಮಹಿಳೆಯರಲ್ಲಿ ಅತಿ ಹೆಚ್ಚು ಸ್ತನ ಮತ್ತು ಗರ್ಭ ಕೊರಳಿನ ಕ್ಯಾನ್ಸರ್ ಕಂಡು ಬರುತ್ತದೆ. ಸ್ತನ ಕ್ಯಾನ್ಸರ್‌ನಲ್ಲಿ ಸ್ತನದಲ್ಲಿ ಗಂಟು, ಮೊಲೆ ತೊಟ್ಟು ಒಳಗೆ ಹೋಗಿರುವುದು, ಸ್ತನದ ಮೇಲಿನ ಚರ್ಮ ನೆರಗಿ ಮತ್ತು ಕೆಲಭಾಗದಲ್ಲಿ ಕಲ್ಲಿನ ಹಾಗೆ ಗಟ್ಟಿಯಾಗಿರುವುದು, ಮೊಲೆ ತೊಟ್ಟಿನ ಮೂಲಕ ರಕ್ತ ಮತ್ತು ಕೀವು ಸ್ರಾವಯಾಗುವ ಲಕ್ಷಣಗಳು ಇರುತ್ತವೆ. ಗರ್ಭಕೊರಳಿನ ಕ್ಯಾನ್ಸರ್‌ನಲ್ಲಿ ಬಿಳಿಮುಟ್ಟು, ಕಿಬ್ಬೊಟ್ಟೆ ಹೊಟ್ಟೆ ನೋವು, ಸಂಸಾರದ ನಂತರ ರಕ್ತಸ್ರಾವ, ವಯಸ್ಸಾದವರಲ್ಲಿ ಮುಟ್ಟು ನಿಂತು ಪುನಃ ಕೆಲ ತಿಂಗಳು ವರ್ಷಗಳ ಬಳಿಕ ಮರಳಿ ಮುಟ್ಟು ಕಾಣಿಸುವ ಲಕ್ಷಣಗಳು ಇರುತ್ತವೆ. ಇಂತಹ ಲಕ್ಷಣಗಳಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ದಂತ ಆರೋಗ್ಯ ಅಧಿಕಾರಿ ಡಾ. ಅಭಿಷೇಕ ಮಾತನಾಡಿ, ಬಾಯಿ ಕ್ಯಾನ್ಸರ್ ತಂಬಾಕು ಉತ್ಪನ್ನಗಳ ಬಳಕೆ, ಅಸ್ವಚ್ಛತೆಯಿಂದ ಬಾಯಿಯಲ್ಲಿ ಹುಣ್ಣುಗಳಿದ್ದು, ಚಿಕಿತ್ಸೆ ಪಡೆಯದಿದ್ದಲ್ಲಿ ಬಾಯಿಯಲ್ಲಿ ತೀರಾ ಚೂಪಾದ ಹಲ್ಲುಗಳಿದ್ದು, ಹಲ್ಲು ಒಳಭಾಗದಲ್ಲಿ ಚುಚ್ಚಿ ಗಾಯಗಳಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಬಾಯಿ ಕ್ಯಾನ್ಸರ್ ಬರುವ ಸಂಭವ ಇರುತ್ತದೆ ಎಂದರು.ಎನ್‌ಸಿಡಿ ಶುಷ್ರೂಶಕ ಅಧಿಕಾರಿ ಮಾರುತಿ, ನೇತ್ರಾಧಿಕಾರಿ ಮಹ್ಮದ್ ಯಾಶಿನಶೇಖ್, ಪ್ರಮುಖರಾದ ಅಮರೇಶ, ಪುಷ್ಪಾಂಜಲಿ, ಬಸವರಾಜ, ಸಣ್ಣಯಮನೂರಪ್ಪ, ಅಬ್ದುಲ್ ಖೈರ್, ಶಮಶಾದಬೇಗಂ ಇತರರಿದ್ದರು.