ಕನ್ನಡಪ್ರಭ ವಾರ್ತೆ, ತುಮಕೂರು ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧಾರಣಾ ಸಾಧನೆಗೈದ ವಿಶ್ವ ಪ್ರಸಿದ್ಧ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಮತ್ತು ರೋಬೋಟಿಕ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸಿ.ಪಳನಿವೇಲು ಅವರಿಗೆ 13ರಂದು ಶುಕ್ರವಾರ ಡಾ. ಎಂ.ಆರ್.ಹುಲಿನಾಯ್ಕರ್ ಶಾಂತಾದುರ್ಗಾದೇವಿ ಹುಲಿನಾಯ್ಕರ್ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್‌ರವರು ಹೇಳಿದ್ದಾರೆ. ನಗರದ ಶಿರಾರಸ್ತೆಯ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಬಡ ರೈತನ ಮಗನಾಗಿ ಜನಿಸಿದ ಡಾ. ಪಳನಿವೇಲು ಕೊಯಮತ್ತೂರಿನ ಜಿಇಎಂ ಆಸ್ಪತ್ರೆಯ ಸಂಸ್ಥಾಪಕರಾಗಿ, ವಿಶ್ವದ ಎಲ್ಲ ಕಡೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಬಳಕೆಗೆ ಮೂಲ ಕಾರಣಕರ್ತರಾಗಿದ್ದಾರೆ. ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಕಾಲೇಜಿನ ಫೆಲೋಷಿಪ್ ಪಡೆದು ವೈದ್ಯಕೀಯ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪುರಸ್ಕಾರಕ್ಕೆ ಎರಡು ಸಾರಿ ಭಾಜನರಾಗಿದ್ದಾರೆ. ಲ್ಯಾಪ್ರೋಸ್ಕೋಪಿಕ್ ಕುರಿತಂತೆ ಹಲವು ಮಹತ್ವದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಹ ಅನೇಕ ವೈದ್ಯಕೀಯ ಕೃತಿಗಳನ್ನು ಹೊರ ತಂದಿದ್ದು, ಹಲವು ತಾಂತ್ರಿಕ ಆವಿಷ್ಕಾರಗಳಿಗೂ ಕಾರಣರಾಗಿದ್ದಾರೆ. ಹೀಗಾಗಿ ಅವರ ಸಾಧನೆ ಗುರುತಿಸಿ ಪುರಸ್ಕಾರ ನೀಡಲಾಗುತಿದೆ. ಈ ಪ್ರಶಸ್ತಿ ಮೊತ್ತ ಒಂದೂವರೆ ಲಕ್ಷ ರುಪಾಯಿ ಹಾಗೂ ಭಿನ್ನವತ್ತಳೆ ಒಳಗೊಂಡಿರುತ್ತದೆ ಎಂದು ಹೇಳಿದರು. ಈ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಆಚಾರ್ಯ ಎಂ. ನಾಗರಾಜ್ ಹಾಗೂ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಪರಿಷತ್ ಅಧ್ಯಕ್ಷ ಬಸವರಾಜ ಪಾಟೀಲ್ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಈಶ್ವರ್ ಆರ್. ಹೊಸಮನಿ ಮೊದಲಾದವರು ಸಾಕ್ಷಿಯಾಗಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರ ತಜ್ಞೆ ಡಾ. ಲಾವಣ್ಯ, ಇಂಜಿನಿಯರ್ ಕಾಲೇಜು ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಹಾಜರಿದ್ದರು.