ಸಾರಾಂಶ
ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಪ್ಪನ ಜೊತೆ ಇರಲು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರೌಡಿ ಶೀಟರ್ ಗೆ 15 ದಿನಗಳ ಪೆರೋಲ್ ಮತ್ತು ಅಮ್ಮ ಬೆಳೆದಿರುವ ಬೆಳೆ ನೋಡಿಕೊಳ್ಳಲು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 10 ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಮಗನಿಗೆ 60 ದಿನಗಳ ಪೆರೋಲ್
ಬೆಂಗಳೂರು : ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಪ್ಪನ ಜೊತೆ ಇರಲು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರೌಡಿ ಶೀಟರ್ ಗೆ 15 ದಿನಗಳ ತುರ್ತು ಪೆರೋಲ್ ಮತ್ತು ಜಮೀನಿನನಲ್ಲಿ ಅಮ್ಮ ಬೆಳೆದಿರುವ ಬೆಳೆ ನೋಡಿಕೊಳ್ಳಲು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 10 ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಮಗನಿಗೆ 60 ದಿನಗಳ ಪೆರೋಲ್ ನೀಡಿ ಹೈಕೋರ್ಟ್ ಮಾನವೀಯತೆ ಮರೆದಿದೆ.
ಕ್ಯಾನ್ಸರ್ ನಿಂದ ಬಳುತ್ತಿರುವ ಅಪ್ಪನೊಂದಿಗೆ ಇರಲು ಪೆರೋಲ್ ನೀಡುವಂತೆ ಕೋರಿ ದೊಡ್ಡಬಳ್ಳಾಪುರದ ಪವನ್ ಮತ್ತು ತಾನು ಬೆಳೆದಿರುವ ಬೆಳೆ ನೋಡಿಕೊಳ್ಳಲು ಪುತ್ರ ಕೇಶವನಿಗೆ ಪೆರೋಲ್ ನೀಡುವಂತೆ ಕೋರಿ ಕೋಲಾರದ ಹೂಡಲಿ ನಿವಾಸಿ ರತ್ನಮ್ಮ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಜಮೀನಿನಲ್ಲಿ ಬೆಳೆದಿರುವ ಬೆಳೆ ನೋಡಿಕೊಳ್ಳಲು ತನಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಗ ಕೇಶವನಿಗೆ ಸಾಮಾನ್ಯ ಪೆರೋಲ್ ನೀಡಬೇಕು ಎಂದು ಕೋರಿ ರತ್ನಮ್ಮ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಕೇಶವಗೆ ಪೆರೋಲ್ ನೀಡುವ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಪೀಠ, 2025ರ ಮಾ.17ರಿಂದ ಅನ್ವಯವಾಗುವಂತೆ ಮೇ 15ರ ಸಂಜೆಯವರೆಗೆ 60 ದಿನಗಳ ಕಾಲ ಮಂಜೂರು ಮಾಡಿದೆ. ಕೇಶವನನ್ನು ಮಾ.17ರಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಬೆಂಗಳೂರಿನ ಕೇಂದ್ರ ಕಾರಾಗೃಹದ ಅಧೀಕ್ಷರಿಗೆ ನಿರ್ದೇಶಿಸಿದೆ.
ಕ್ಯಾನ್ಸರ್ ಪೀಡಿತ ತಂದೆ:
ಇನ್ನು ರೌಡಿಶೀಟರ್ ಪವನ್ ತಂದೆ ಕ್ಯಾನ್ಸರ್ ರೋಗದಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಈ ಹಂತದಲ್ಲಿ ತಂದೆಯೊಂದಿಗೆ ಮಗ ಇರುವ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಪೀಠವು ಸಾಮಾನ್ಯ ಪೆರೋಲ್ ಅಲ್ಲದೆ ಮಾ.15ರಿಂದ ಅನ್ವಯವಾಗುವಂತೆ ಮಾ.29ರವರಗೆ 15 ದಿನಗಳ ಕಾಲ ತುರ್ತು ಪೆರೋಲ್ ನೀಡಿದೆ.
ಈ ಇಬ್ಬರು ದೋಷಿಗಳು ಪೆರೋಲ್ ಅವಧಿ ಕೂಡಲೇ ಜೈಲಿಗೆ ವಾಪಸಾಗುವುದನ್ನು ಖಾತರಿಪಡಿಸಿಕೊಳ್ಳಲು ಸಂಬಂಧಪಟ್ಟ ಜೈಲಿನ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ದೋಷಿಗಳು ಪೆರೋಲ್ ಅವಧಿಯಲ್ಲಿ ಪ್ರತಿ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಹಾಜರಾಗಿ ಸಹಿ ಮಾಡಬೇಕು ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ:
ಮದುವೆಯಾಗುವುದಾಗಿ ಭರವಸೆ ನೀಡಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿ ಮಾಡಿದ ಆರೋಪ ಸಂಬಂಧ ಕೇಶವ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಕೇಶವನಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಕೋಲಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2020ರ ನ.10ರಂದು ಆದೇಶಿಸಿತ್ತು. ಪ್ರಕರಣ ಸಂಬಂಧ ಈವರೆಗೆ ಕೇಶವ 6 ವರ್ಷ 7 ತಿಂಗಳ ಜೈಲುವಾಸ ಅನುಭವಿಸಿದ್ದಾನೆ. ಮಗನಿಗೆ ಪೆರೋಲ್ ಕೋರಿ ಮೊದಲ ಬಾರಿಗೆ ತಾಯಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರು ತಿರಸ್ಕರಿಸಿದ್ದರಿಂದ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸ್ನೇಹಿತನ ರುಂಡ ಕತ್ತರಿಸಿದ್ದ ಪವನ್
ಪವನ್ ದೊಡ್ಡಬಳ್ಳಾಪುರದಲ್ಲಿ ರೌಡಿಯಾಗಿದ್ದು, ಆತನ ವಿರುದ್ಧ ಪೊಲೀಸರು ರೌಡಿಶೀಟ್ ತೆರೆದಿದ್ದರು. ಸ್ನೇಹಿತ ಉಪೇಂದ್ರನಿಗೆ ಸ್ವಲ್ಪ ಮಾತನಾಡಬೇಕಿದೆ ಎಂದು ನಂಬಿಸಿ ಮನೆಯಿಂದ 2018ರ ಮೇ 30ರಂದು ನಾಗರಕೆರೆಯ ನಡುಗಡ್ಡೆಯ ಬಳಿಗೆ ಕರೆದುಕೊಂಡು ಹೋಗಿ ಮಚ್ಚಿನಿಂದ ರುಂಡ ಕತ್ತರಿಸಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಪವನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2025ರ ಜ.22ರಂದು ಆದೇಶಿಸಿತ್ತು. ಪ್ರಕರಣದ ವಿಚಾರಣಾವಧಿಯಲ್ಲಿಯೇ ಪವನ್ 7 ವರ್ಷ 9 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದಾನೆ. ಇದೀಗ ತಂದೆ ಕ್ಯಾನ್ಸರ್‌ನಿಂದ ತೀವ್ರವಾಗಿ ನರಳುತ್ತಿದ್ದು, ಅವರೊಂದಿಗೆ ಇರಲು ಪೆರೋಲ್ ನೀಡುವಂತೆ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಬೆಂಗಳೂರಿನ ಕೇಂದ್ರ ಕಾರಾಗೃಹ ಅಧೀಕ್ಷಕರು ತಿರಸ್ಕರಿಸಿದ್ದರಿಂದ ಪವನ್ ಹೈಕೋರ್ಟ್‌ಗೆ ಮೊರೆ ಹೋಗಿದ್ದ.