ಸಾರಾಂಶ
ದೇವರಾಜ ಅರಸ್ ಶಿಕ್ಷಣ ಸಂಸ್ಥೆ ೪೦ನೇ ವರ್ಷದ ವಾರ್ಷಿಕೋತ್ಸ ಪೂರ್ವಭಾವಿ ಸಭೆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಸಂಸ್ಥೆಯ ಸಿಇಓ, ಹಾಗೂ ಶಾಸಕ ಚಂದ್ರಪ್ಪ ಪುತ್ರ ಎಂ.ಸಿ.ರಘುಚಂದನ್ ಮುಂಬರುವ ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೂ ಆಕಾಂಕ್ಷಿಯಾದ್ದೇತ್ತೇನೆ ಎಂದು ಹೇಳಿದ್ದಾರೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ನಾನೂ ಅಭ್ಯರ್ಥಿಯಾಗಿರುತ್ತೇನೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಪುತ್ರ, ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಹೇಳಿದ್ದಾರೆ.
ತಮ್ಮ ಸಂಸ್ಥೆಯು ೪೦ನೇ ವರ್ಷದ ವಾರ್ಷಿಕೋತ್ಸ ಪೂರ್ವಭಾವಿ ಸಭೆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಎಂ.ಸಿ.ರಘುಚಂದನ್ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ನಾನು ಪಕ್ಷದ ಬಿಜೆಪಿಯಿಂದ ಟಿಕೆಟ್ ಕೇಳಿದ್ದೆ. ಆದರೆ, ವಯಸ್ಸಿನ ಕಾರಣಕ್ಕೆ ಹಿಂದೆ ಸರಿಯಲಾಗಿತ್ತು. ಈಗ ಮತ್ತೆ ಲೋಕಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೇ ಪಕ್ಷದ ವರಿಷ್ಠರ ವಲಯದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ವಿವಿಧ ಹಂತದ ನಾಯಕರ ಜೊತೆಗೆ ಟಿಕೆಟ್ ಕುರಿತು ಮಾತುಕತೆ ನಡೆಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಆದರೂ, ಅಂತಿಮವಾಗಿ ನಮ್ಮದು ಶಿಸ್ತಿನ ಪಕ್ಷ. ಯಾರಿಗೇ ಟಿಕೇಟ್ ಕೊಟ್ಟರೂ ಪಕ್ಷದ ಗೆಲುವಿಗೆ ಕೆಲಸ ಮಾಡುತ್ತೇವೆ. ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡಿ ಟಿಕೇಟ್ ನೀಡುವುದು ನಮ್ಮ ಪಕ್ಷದ ಪದ್ಧತಿ. ಅಲ್ಲಿಯ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೊರಗಿನಿಂದ ಬಂದವರಿಗೆ ಹೆಚ್ಚು ಮಣೆ ಹಾಕುವ ಊರಾಗಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರು ಬರಬೇಕು. ನಾನು ಸ್ಥಳೀಯನಾಗಿರುವುದರಿಂದ ಇಲ್ಲಿನ ಸಮಸ್ಯೆಗಳು ಚೆನ್ನಾಗಿ ತಿಳಿದಿವೆ. ಹಾಗಾಗಿ ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಹೆಚ್ಚು ಅನುಕೂಲವಾಗಲಿದೆ. ಮತದಾರರು ಸಹ ಹೊರಗಿನವರಿಗೆ ಮತ ನೀಡುವುದರ ಮೂಲಕ ಗೆಲ್ಲಿಸುತ್ತಾರೆ. ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಿದರೆ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬಹುದು. ಈ ಹಿನ್ನೆಲೆಯಲ್ಲಿ ಬರುವ ಲೋಕಸಭೆ ಚುನಾವಣೆಗೆ ಸ್ಪರ್ಥಿಸಲು ಬಯಸಿದ್ದೇನೆ ಎಂದರು.ಈಗಾಗಲೇ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಕುರಿತು ಪಕ್ಷದಿಂದ ಮೂರು ಬಾರಿ ಸಮೀಕ್ಷೆ ನಡೆದಿದೆ. ಸಮೀಕ್ಷೆ ಆಧಾರದಲ್ಲೇ ನಮ್ಮ ಪಕ್ಷದಲ್ಲಿ ಟಿಕೆಟ್ ನೀಡುವುದು. ಹಾಗಾಗಿ ನಾನು ಕೂಡಾ ಆಕಾಂಕ್ಷಿ ಎಂದು ವರಿಷ್ಠರ ಬಳಿ ಹೇಳಿದ್ದೇನೆ. ಒಂದು ವೇಳೆ ನಮಗೆ ಟಿಕೆಟ್ ಸಿಕ್ಕರೆ ಇಡೀ ಕ್ಷೇತ್ರ ಸುತ್ತಾಡಿ ಚುನಾವಣೆ ನಡೆಸುತ್ತೇವೆ. ಎ.ನಾರಾಯಣಸ್ವಾಮಿ ಅಥವಾ ಬೇರೆ ಯಾರಿಗೆ ಕೊಟ್ಟರೂ ಹೊಳಲ್ಕೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.ಕಳೆದ ಲೋಕಸಭೆ ಚುನಾವಣೆ ವೇಳೆ ಎ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಪಕ್ಷ ಸೂಚನೆ ಕೊಟ್ಟಿತ್ತು. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ನಮ್ಮ ತಂದೆ ಎಂ.ಚಂದ್ರಪ್ಪ ೪೦ ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಎ.ನಾರಾಯಣಸ್ವಾಮಿ ಅವರಿಗೂ ಅಷ್ಟೇ ಅಂತರದ ಮತಗಳನ್ನು ಕೊಡಿಸಿದ್ದೇವೆ ಎಂದು ತಿಳಿಸಿದರು.