ಸಾರಾಂಶ
ಕೆಎಂಸಿಯ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಮೌನವಾಗಿ ಕೈಯಲ್ಲಿ ಕ್ಯಾಂಡಲ್ ಮತ್ತು ಖಂಡನಾ ಫಲಕಗಳನ್ನು ಹಿಡಿದು ನಡಿಗೆ ಮೂಲಕ, ಈ ಕ್ರೂರತೆಯ ವಿರುದ್ಧ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಕೊಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಸಂಜೆ ಸೈಲೆಂಟ್ ಕ್ಯಾಂಡಲ್ ಮಾರ್ಚ್ ನಡೆಸಿದರು.ಕೊಲ್ಕತ್ತಾದ ಈ ಕ್ರೂರ ಘಟನೆಯು ಭಾರತದಲ್ಲಿ ಮಹಿಳೆಯರು ಮತ್ತು ವೈದ್ಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಈ ಘಟನೆಯು ವೈದ್ಯಕೀಯ ಸಮುದಾಯದ ತಳಪಾಯವನ್ನು ಅಲ್ಲಾಡಿಸಿದೆ ಮತ್ತು ಸುಧಾರಿತ ಭದ್ರತಾ ಕ್ರಮಗಳ ತುರ್ತು ಅಗತ್ಯತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕೆಎಂಸಿಯ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಮೌನವಾಗಿ ಕೈಯಲ್ಲಿ ಕ್ಯಾಂಡಲ್ ಮತ್ತು ಖಂಡನಾ ಫಲಕಗಳನ್ನು ಹಿಡಿದು ನಡಿಗೆ ಮೂಲಕ, ಈ ಕ್ರೂರತೆಯ ವಿರುದ್ಧ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಅಸೋಸಿಯೇಟ್ ಡೀನ್‌ಗಳು ಮತ್ತು ಕೆಎಂಸಿಯ ಹಲವಾರು ವೈದ್ಯರು ಕೂಡ ಈ ಖಂಡನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಇಂತಹ ಹಿಂಸಾಚಾರದ ವಿರುದ್ಧ ವೈದ್ಯಕೀಯ ಭ್ರಾತೃತ್ವದ ಒಗ್ಗಟ್ಟಿನ ನಿಲುವನ್ನು ಗಟ್ಟಿಯಾಗಿ ಸಾರಿದರು.ಕಾರ್ಯಕ್ರಮವು ಸಂಜೆ 5.30ಕ್ಕೆ ಸಾಂಕ್ರಾಮಿಕ ರೋಗಗಳ ಬ್ಲಾಕ್ ಬಳಿಯ ಕಾರಂಜಿಯಲ್ಲಿ ಪ್ರಾರಂಭವಾಯಿತು. ನಡಿಗೆಯು ಸಂಜೆ 6 ಗಂಟೆಗೆ ಪ್ರಾರಂಭವಾಯಿತು ಮತ್ತು ಮಣಿಪಾಲ ಕ್ಯಾಂಪಸ್‌ನೊಳಗಿನ ಪ್ರಮುಖ ಕಟ್ಟಡ, ವಿಭಾಗ, ಮಾರ್ಗಗಳಲ್ಲಿ ಸಾಗಿತು. ಇಂಟರಾಕ್ಟ್ ಕಟ್ಟಡದಲ್ಲಿ ನಡಿಗೆ ಮುಕ್ತಾಯವಾಯಿತು.
ಯಾವುದೇ ರೂಪದಲ್ಲಿ ಹಿಂಸೆಯನ್ನು ಸಹಿಸುವುದಿಲ್ಲ, ಇಂತಹ ಹೇಯ ಕೃತ್ಯಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು, ಇತರರ ಕಾಳಜಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ವೈದ್ಯಕೀಯ ಭ್ರಾತೃತ್ವದ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಬೇಕು ಎಂದು ವಿದ್ಯಾರ್ಥಿಗಳು ಖಂಡನಾ ಫಲಕಗಳ ಮೂಲಕ ಪ್ರತಿಪಾದಿಸಿದರು.