ಸಾರಾಂಶ
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯಲ್ಲಿ ಪಂಜಾಬಿನ ಕನೋರಿ ಹಾಗೂ ಶಂಭು ಬಾರ್ಡರ್‌ನಲ್ಲಿ ನ್ಯಾಯಯುತ ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಸತ್ತಿದ್ದ ರೈತರ ಬಂಧನ ಕ್ರಮ ಖಂಡಿಸಿ ರಾಜ್ಯ ರೈತ ಸಂಘದ ಮುಖಂಡರು ಪ್ರತಿಭಟಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ಹಾಗೂ ನೂರಾರು ರೈತ ಮುಖಂಡರ ಬಂಧನವನ್ನು ಖಂಡಿಸಿ ರಾಜ್ಯಕಬ್ಬು ಬೆಳೆಗಾರ ಸಂಘದ ವತಿಯಿಂದ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ದೊಡ್ಡಿಂದುವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮೊಂಬತ್ತಿ ಹಿಡಿದು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಈ ವೇಳೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಿಂದ್ವಾಡಿ ಮಾದೇಶ್ ಮಾತನಾಡಿ, ಪಂಜಾಬಿನ ಕನೋರಿ ಹಾಗೂ ಶಂಭು ಬಾರ್ಡರ್‌ನಲ್ಲಿ ಕಳೆದ ಒಂದು ವರ್ಷದಿಂದ ನ್ಯಾಯಯುತ ಹಕ್ಕುಗಳಾದ ಎಂಎಸ್‍ಪಿ ಕಾಯ್ದೆ ಗ್ಯಾರಂಟಿ ಕಾನೂನು ಜಾರಿ, ದೇಶದ ರೈತರ ಸಂಪೂರ್ಣ ಸಾಲ ಮನ್ನಾ, 60 ವರ್ಷ ತುಂಬಿದ ರೈತರಿಗೆ ಪೆನ್ಷನ್ (ಮಾಸಾಶನ) ಇತ್ಯಾದಿ ಜಾರಿ ಮಾಡುವಂತೆ ಒತ್ತಾಯಿಸಿ ಚಳವಳಿ ನಡೆಸುತ್ತಿದ್ದ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹಾಗೂ ನೂರಾರು ರೈತ ಮುಖಂಡರನ್ನು ಬಂಧಿಸಿ ಚಳವಳಿ ವಿಫಲಗೊಳಿಸಲು ಯತ್ನಿಸುತ್ತಿರುವ ಪಂಜಾಬ್ ಹಾಗೂ ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.ಕೂಡಲೇ ಬಂಧನ ಮಾಡಿರುವ ರೈತರ ಬಿಡುಗಡೆ ಮಾಡಬೇಕು ಹಾಗೂ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಪ್ರದೀಪ್, ಚಂದನ್, ಬಲರಾಮ್, ಬಲ್ಲು ನಿಂಗಶೆಟ್ಟಿ, ಆರ್.ವೆಂಕಟೇಶ್, ನಾಗರಾಜು, ಮನು, ಮಂಗಳಮ್ಮ, ಬಸವಲಿಂಗಮ್ಮ, ನಾಗಮ್ಮ, ಮಣಿಯಮ್ಮ, ಜಯಲಕ್ಷ್ಮಮ್ಮ, ಮನೆಕಮ್ಮ, ಜಯಂತಿ, ನಾಗಲಕ್ಷ್ಮೀ ಇತರರಿದ್ದರು.