ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡುವಂತಿಲ್ಲ: ಸಚಿವ ಎಚ್.ಕೆ. ಪಾಟೀಲ್

| Published : Jun 17 2025, 12:03 AM IST / Updated: Jun 17 2025, 12:04 AM IST

ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡುವಂತಿಲ್ಲ: ಸಚಿವ ಎಚ್.ಕೆ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌. ಕಾಂತರಾಜ ಮತ್ತು ಕೆ. ಜಯಪ್ರಕಾಶ ಹೆಗ್ಡೆ ಅವರ ವರದಿಗಳು ಈಗಾಗಲೇ 10 ವರ್ಷ ಆಗಿರುವುದರಿಂದ ಸಾಕಷ್ಟು ಬದಲಾವಣೆಯಾಗಿರುತ್ತವೆ. ಯಾವುದೇ ಅಧ್ಯಯನ ವರದಿ 10ದೊಳಗೆ ಜಾರಿಯಾಗಬೇಕು. ತಡವಾಗಿದ್ದರಿಂದ ಇದೀಗ ಮತ್ತೊಮ್ಮೆ ಮರು ಸಮೀಕ್ಷೆ ಮಾಡಲಾಗುತ್ತಿದೆ.

ಕೊಪ್ಪಳ:

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾರೂ ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಹೇಳಿದ್ದು, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್‌. ವಿಶ್ವನಾಥ ಸಿಎಂ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತಿರಿಸಿದ ಸಚಿವರು, ಅವರು ನಮ್ಮ ಪಕ್ಷದವರಲ್ಲ. ಅವರೇಕೆ ಸಿಎಂ ಬದಲಾವಣೆ ಕುರಿತು ಮಾತನಾಡುತ್ತಾರೆ ಎಂದು ಮರುಪ್ರಶ್ನಿಸಿದರು.

ಈ ಕುರಿತಂತೆ ಯಾರೇ ಹೇಳಿಕೆ ನೀಡಿದರೂ ನಾನು ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟಪಡಿಸಿದರು. ನೀವು ಮುಖ್ಯಮಂತ್ರಿ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನೀವು ಏನೇ ಕೇಳಿದರೂ ನಾನು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದನ್ನೇ ಹೇಳುತ್ತೇನೆ ಎಂದರು.

ನಮ್ಮದು ಜಾತಿಗಣತಿ ಅಲ್ಲ:

ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದ್ದು, ರಾಜ್ಯ ಸರ್ಕಾರ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆಂಬ ಪ್ರಶ್ನೆಗೆ, ನಾವು ಮಾಡುತ್ತಿರುವುದು ಜಾತಿಗಣತಿಯಲ್ಲ. ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನವಾಗಿದೆ. ಇದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದನ್ನೇ ಕೇಂದ್ರ ಸರ್ಕಾರದಿಂದ ಮಾಡಿಸಿ ಎಂದರೆ ಒಪ್ಪಲಿಲ್ಲವೇಕೆ? ಎಂದರು.

ತಡವಾಗಿದ್ದರಿಂದ ಮರು ಸಮೀಕ್ಷೆ:

ಎಚ್‌. ಕಾಂತರಾಜ ಮತ್ತು ಕೆ. ಜಯಪ್ರಕಾಶ ಹೆಗ್ಡೆ ಅವರ ವರದಿಗಳು ಈಗಾಗಲೇ 10 ವರ್ಷ ಆಗಿರುವುದರಿಂದ ಸಾಕಷ್ಟು ಬದಲಾವಣೆಯಾಗಿರುತ್ತವೆ. ಯಾವುದೇ ಅಧ್ಯಯನ ವರದಿ 10 ವರ್ಷದೊಳಗೆ ಜಾರಿಯಾಗಬೇಕು. ತಡವಾಗಿದ್ದರಿಂದ ಇದೀಗ ಮತ್ತೊಮ್ಮೆ ಮರು ಸಮೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದು, ಈಗಾಗಲೇ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಇಷ್ಟಾದರೂ ಸಹ ಪ್ರಕರಣವನ್ನು ಮುಚ್ಚಿಹಾಕಲು ಜಾತಿಗಣತಿ ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಅಂಥ ಮುಚ್ಚಿಹಾಕುವ ಇರಾದೆ ಇಲ್ಲ ಎಂದರು.

ಅಕ್ರಮ ಚಟುವಟಿಕೆ ವಿರುದ್ಧ ಕ್ರಮ:

ಕೊಪ್ಪಳ ಜಿಲ್ಲಾದ್ಯಂತ ಪ್ರವಾಸೋದ್ಯಮ ಸ್ಥಳಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುತ್ತದೆ. ಹಾಗೊಂದು ವೇಳೆ ಕ್ರಮ ವಹಿಸದೆ ಇದ್ದರೇ ಕ್ರಮ ವಹಿಸದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವರು, ಪ್ರವಾಸಿತಾಣಿಗಳ ಅಭಿವೃದ್ಧಿಗೆ ದತ್ತು ಯೋಜನೆ ಪ್ರಾರಂಭಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ 2ನೇ ಹಂತದ ದತ್ತು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಂಜನಾದ್ರಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಈಗಗಾಲೇ ಕೈಗೊಳ್ಳಲಾಗಿದೆ. 75 ವರ್ಷ ಹೀಗೇ ಕಾಲದೂಡಿಕೊಂಡು ಬರಲಾಗಿದೆ. ಆದರೆ, ಈಗ ಹಾಗೆ ಮಾಡುವುದಿಲ್ಲ. ಏನು ಹೇಳುತ್ತೇವೆ ಅದನ್ನು ಮಾಡುತ್ತೇವೆ ಎಂದ ಸಚಿವರು, ಅಂಜನಾದ್ರಿ ಸೇರಿದಂತೆ ರಾಜ್ಯಾದ್ಯಂತ 11 ಸ್ಥಳಗಳಲ್ಲಿ ಕೇಬಲ್ ಕಾರ್ ಅಥವಾ ರೋಪ್ ವೇ ಮಾಡಲಾಗುತ್ತದೆ. ಇದರಿಂದ ನೈಜತೆಗೆ ಮತ್ತು ಮಹತ್ವಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕುರಿತು ಸಹ ಪರಾಮರ್ಶೆ ಮಾಡಲಾಗುವುದು ಎಂದರು.

ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕಾಟನ್ ಪಾಶಾ, ಅಮ್ಜದ್ ಪಟೇಲ್, ಕೆ.ಎಂ. ಸಯ್ಯದ್‌, ಗಾಳೆಪ್ಪ ಪೂಜಾರ, ಗೂಳಪ್ಪ ಹಲಿಗೇರಿ, ಮಾಲತಿ ನಾಯಕ ಹಾಗೂ ಕಿಶೋರಿ ಬೂದನೂರು ಇದ್ದರು.