ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು: ಬೇಸಿಗೆಯ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲ ತಾಪಕ್ಕೆ ಅಂಜಿ ಜನರು ಮತದಾನದಿಂದ ದೂರ ಉಳಿಯಬಾರದೆಂಬ ಕಾರಣಕ್ಕೆ ಮತಗಟ್ಟೆಯಲ್ಲಿ ನೆರಳಿನ ವ್ಯವಸ್ಥೆಗೆ ಜಿಲ್ಲಾ ಚುನಾವಣೆ ವಿಭಾಗ ಮುಂದಾಗಿದೆ.
ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಾದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಏ.26ಕ್ಕೆ ಮತದಾನ ನಡೆಯಲಿದೆ. ಬೆಂಗಳೂರಿನಲ್ಲಿ ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.
ಈ ನಡುವೆ ಬೆಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಗಲು ವೇಳೆಯಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೆ ಹಿಂದೇಟು ಹಾಕುವ ಸ್ಥಿತಿ ಇದೆ. ಬಿಸಿಲ ಝಳಕ್ಕೆ ಅಂಜಿ ಮತದಾರರು ಚುನಾವಣಾ ಮತದಾನದಿಂದ ದೂರ ಉಳಿಯುವ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಚುನಾವಣಾ ವಿಭಾಗವೂ ಮತಗಟ್ಟೆಯಲ್ಲಿ ನೆರಳಿನ ವ್ಯವಸ್ಥೆ ಮಾಡುವ ಮೂಲಕ ಮತದಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಕ್ಕೆ ತಯಾರಿ ನಡೆಸಿದೆ.
ನೆರಳು ಇಲ್ಲದ ಮತಗಟ್ಟೆ ಗುರುತು: ಮೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8,989 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಪೈಕಿ ನೆರಳಿನ ವ್ಯವಸ್ಥೆ ಇಲ್ಲದ ಮತಗಟ್ಟೆಗಳನ್ನು ಗುರುತಿಸುವುದಕ್ಕೆ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಹಾಗೂ ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ನೆರಳಿಗೆ ಟೆಂಟ್ ವ್ಯವಸ್ಥೆ: ನೆರಳಿನ ಸಮಸ್ಯೆ ಇರುವ ಹಾಗೂ ಹೆಚ್ಚಿನ ಮತದಾರರು ಇರುವ ಮತಗಟ್ಟೆಯಲ್ಲಿ ಮತದಾರರಿಗೆ ಬಿಸಿಲ ತಾಪ ಉಂಟಾಗದಂತೆ ಟೆಂಟ್, ಶಾಮಿಯಾನ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ, ಕುಡಿಯುವುದಕ್ಕೆ ನೀರಿನ ವ್ಯವಸ್ಥೆ ಸೇರಿದಂತೆ ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು, ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಮತದಾರರಿಗೆ ಮತಗಟ್ಟೆ ಆವರಣದಲ್ಲಿ ಸೂಕ್ತ ನೆರಳಿನ ವ್ಯವಸ್ಥೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ನೆರಳಿನ ಕೊರತೆ ಇರುವ ಮತಗಟ್ಟೆಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ ಎಂದು ಚುನಾವಣಾ ವಿಭಾಗ ವಿಶೇಷ ಆಯುಕ್ತ ಸೆಲ್ವಮಣಿ ಹೇಳಿದರು.