ಬಿಎಸ್‌ವೈ ಕುಟುಂಬ ರಾಜಕಾರಣ ಕೊನೆಗಾಣಿಸುವವರೆಗೆ ವಿರಮಿಸಲಾರೆ: ಈಶ್ವರಪ್ಪ

| Published : Apr 01 2024, 12:47 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದ ದೇವಕಿ ಸಭಾಭವನದಲ್ಲಿ ರಾಷ್ಟ್ರಭಕ್ತ ಬಳಗ ವತಿಯಿಂದ ಬೈಂದೂರು ಕಾರ್ಯಕರ್ತರ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಈಶ್ವರಪ್ಪ ಯಡಿಯೂರಪ್ಪ ಅವರನ್ನು ತೀವ್ರ ತರಾಡೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕೇಂದ್ರದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ಸಿಡಿದು ನಿಂತಿದ್ದಾರೋ ಹಾಗೆಯೇ ರಾಜ್ಯ ಬಿಜೆಪಿ ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ. ಪ್ರಧಾನಿಯವರ ಹಾದಿಯಲ್ಲೇ ಸಾಗುತ್ತಿರುವ ನಾನು ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಕೊನೆಗಾಣಿಸುವ ತನಕ ವಿರಮಿಸುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ಅವರು ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದ ದೇವಕಿ ಸಭಾಭವನದಲ್ಲಿ ರಾಷ್ಟ್ರಭಕ್ತ ಬಳಗ ವತಿಯಿಂದ ಆಯೋಜಿಸಲಾಗಿದ್ದ ಬೈಂದೂರು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಿಂದುತ್ವಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧವಾಗಿದ್ದ ಬಿಜೆಪಿಯ ಅಪ್ಪಟ ಹಿಂದೂ ಕಾರ್ಯಕರ್ತರಿಗೆ ನಿರಂತರವಾಗಿ ವಂಚಿಸಲಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕೀಯದ ಮೂಲಕ ತನ್ನ ಕುಟುಂಬ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪನವರಷ್ಟೇ ಈ ಈಶ್ವರಪ್ಪನೂ ಕೆಲಸ ಮಾಡಿದ್ದಾನೆ ಎನ್ನುವುದನ್ನು ಯಾವ ಕಾರ್ಯಕರ್ತರೂ ಮರೆತಿಲ್ಲ. ನನ್ನ ಹೋರಾಟ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಅಲ್ಲ. ಕೇವಲ ತಮ್ಮ ಸ್ವಾರ್ಥ ರಾಜಕೀಯ, ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಯಡಿಯೂರಪ್ಪನವರ ವಿರುದ್ಧ ನನ್ನ ಈ ಹೋರಾಟ ಎಂದರು.

ಈ ಚುನಾವಣೆ ಕೇವಲ ಚುನಾವಣೆಯಲ್ಲ. ಇದು ಯಡಿಯೂರಪ್ಪನವರ ಹಣ ಬಲ ಮತ್ತು ಹಿಂದುತ್ವ, ಕಾರ್ಯಕರ್ತರ ನಡುವಿನ ಸಮರ. ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಿಂದುತ್ವವನ್ನು ನನ್ನ ಉಸಿರಾಗಿಸಿಕೊಂಡು ಪಕ್ಷ, ಸಂಘಟನೆ ಮಾಡಿದ್ದೇನೆ. ನಾಯಕರ ಒತ್ತಡಕ್ಕೆ ಮಣಿದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕೈಬಿಟ್ಟಿದ್ದು ನಾನು ಮಾಡಿದ ಮೊದಲ ತಪ್ಪು. ಹಿಂದುತ್ವವನ್ನು ಒಪ್ಪಿಕೊಂಡಿರುವ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ನಾನು ಯಾವತ್ತೂ ಕಾರ್ಯಕರ್ತರ ಜೊತೆಗಿರುವೆ ಎಂದ ಅವರು, ಕಾರ್ಯಕರ್ತರೂ ನನ್ನ ಕೈಬಿಡುವುದಿಲ್ಲ ಎಂದರು.

ರಾಷ್ಟ್ರಭಕ್ತ ಬಳಗ ಮುಖಂಡರಾದ ಶ್ರೀಧರ ಬಿಜೂರು, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲ ನಾಡ, ಸುವರ್ಣ ಪೂಜಾರಿ, ಈಶ್ವರಪ್ಪ ಪುತ್ರ ಕಾಂತೇಶ್, ಮೀನುಗಾರ ಮುಖಂಡ ಯಶವಂತ್ ಗಂಗೊಳ್ಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾರಾಯಣ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯ ಗಣೇಶ್ ರಾವ್, ಗೋಪಾಲ ಗಾಣಿಗ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.-------------ರಾಘವೇಂದ್ರಗೆ ಸೋಲು, ವಿಜಯೇಂದ್ರ ರಾಜೀನಾಮೆ: ಈಶ್ವರಪ್ಪ ಭವಿಷ್ಯ

ಹಿಂದುತ್ವ, ರಾಮ ಮಂದಿರ, ಗೋರಕ್ಷಣೆಯ ಕುರಿತು ಮಾತನಾಡುವ ನಾಯಕರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಸಿ.ಟಿ. ರವಿ, ಸದಾನಂದ ಗೌಡ, ಯತ್ನಾಳ್, ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ ಅವರಿಗೆ ಮೋಸ ಮಾಡಿದ್ದಾರೆ. ಪಕ್ಷ, ಸಂಘಟನೆಗಾಗಿ ಇಡೀ ದೇಶ ಸುತ್ತಿದರೂ ಸಿ.ಟಿ. ರವಿ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಇದರ ವಿರುದ್ಧ ನನ್ನ ಹೋರಾಟ. ಸಂಸದನಾಗಿ ಆಯ್ಕೆಯಾಗಿ ಮೋದಿಯವರನ್ನು ಪ್ರಧಾನಿ ಮಾಡಲು ಕೈ ಎತ್ತುವೆ. ಯಡಿಯೂಪ್ಪನವರ ದುಡ್ಡನ್ನು ಮೀರಿ ಲೋಕಸಭೆಗೆ ಹೋಗುತ್ತೇನೆ. ಯಡಿಯೂರಪ್ಪನವರಿಗೆ ಬಿಜೆಪಿ ೨೮ ಸೀಟು ಗೆಲ್ಲುವುದು ಮುಖ್ಯವಲ್ಲ, ವಿಜಯೇಂದ್ರ ಅವರನ್ನು ಸಿಎಂ ಮಾಡುವುದು ಮುಖ್ಯವಾಗಿದೆ. ಈ ಚುನಾವಣೆಯಲ್ಲಿ ರಾಘವೇಂದ್ರ ಅವರಿಗೆ ಸೋಲಾಗುತ್ತದೆ. ಆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.