ತುಮಕೂರಿನಿಂದ ಬೆಂಗಳೂರು ಕಡೆಗೆ ಮೈದಾಹಿಟ್ಟು ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಚಾಲಕ ಬೊಮ್ಮನಹಳ್ಳಿ ಗ್ರಾಮದ ರಸ್ತೆ ಪಕ್ಕಕ್ಕೆ ನಿಲ್ಲಿಸಲು ಎಳೆದಿದ್ದಾನೆ.
ದಾಬಸ್ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರೊಂದು ಹಳ್ಳಕ್ಕೆ ಪಲ್ಟಿ ಹೊಡೆದಿರುವ ಘಟನೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ನಡೆದಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ಮೈದಾಹಿಟ್ಟು ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಚಾಲಕ ಬೊಮ್ಮನಹಳ್ಳಿ ಗ್ರಾಮದ ರಸ್ತೆ ಪಕ್ಕಕ್ಕೆ ನಿಲ್ಲಿಸಲು ಎಳೆದಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ರಸ್ತೆ ಪಕ್ಕದಲ್ಲಿ ಹಾಕಿದ್ದ ಹೊಸ ಮಣ್ಣು ಮಳೆಬಂದ ಕಾರಣ ಕುಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಕ್ಯಾಂಟರ್ ವಾಹನದಲ್ಲಿದ್ದ ಚಾಲಕ ಇಸ್ಮಾಯಿಲ್, ಮುಖೇಶ್ ಹಾಗೂ ಮತ್ತೋರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಸಹಾಯದ ಮೂಲಕ ಹಳ್ಳದಿಂದ ವಾಹನ ತೆರವುಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.