ಬ್ಯಾಡಗಿಗೆ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕ: ದರದಲ್ಲಿ ಸ್ಥಿರತೆ

| Published : Mar 22 2024, 01:01 AM IST

ಸಾರಾಂಶ

ಸಹಜ ಸ್ಥಿತಿಯತ್ತ ಮರಳಿದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗುರುವಾರ (ಮಾ.21) ಸುಮಾರು 2 ಲಕ್ಷಕ್ಕೂ ಅಧಿಕ ಮೆಣಸಿಕಾಯಿ ಚೀಲಗಳು ಆವಕವಾಗಿವೆ. ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಮುಂದುವರೆದಿದೆ.

ಬ್ಯಾಡಗಿ: ಸಹಜ ಸ್ಥಿತಿಯತ್ತ ಮರಳಿದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗುರುವಾರ (ಮಾ.21) ಸುಮಾರು 2 ಲಕ್ಷಕ್ಕೂ ಅಧಿಕ ಮೆಣಸಿಕಾಯಿ ಚೀಲಗಳು ಆವಕವಾಗಿವೆ. ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಮುಂದುವರೆದಿದೆ.

ದರ ಕುಸಿತವೆಂದು ಆರೋಪಿಸಿ ರೈತರು ಮಾಡಿದ ಹಿಂಸಾತ್ಮಕ ಹೋರಾಟದಿಂದ ಕಳೆಗುಂದಿದ್ದ ಬ್ಯಾಡಗಿ ಮಾರುಕಟ್ಟೆ ಮತ್ತೆ ಸಹಜ ಸ್ಥಿತಿಯತ್ತ ಮರಳಿದ್ದು, ಕಳೆದ ಸೋಮವಾರ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ಗುರುವಾರವೂ ಸಹ 2.19 ಲಕ್ಷ ಚೀಲಗಳು ಆವಕಾಗಿದ್ದು ವ್ಯಾಪಾರ ವಹಿವಾಟು ನಿರಾತಂಕವಾಗಿ ಮುಂದುವರೆದಿದೆ. ದರದಲ್ಲಿ ಸ್ಥಿರತೆ: ಕಳೆದ ಸೋಮವಾರಕ್ಕೆ ದರಕ್ಕೆ ಹೋಲಿಕೆ ಮಾಡಿದಲ್ಲಿ ಗುರುವಾರ ಮತ್ತೆ ಆವಕ 2 ಲಕ್ಷ ಗಡಿ ದಾಟಿದ್ದರೂ ಸಹ ಸರಾಸರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿರಲಿಲ್ಲ, ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ದರ ನೀಡುತ್ತ ಬಂದಿರುವ ವ್ಯಾಪಾರಸ್ಥರು ಗುರುವಾರವು ಕೂಡ ಉತ್ತಮ ದರಗಳನ್ನು ನೀಡಿದ ಪರಿಣಾಮ ಕಡ್ಡಿ, ಡಬ್ಬಿ ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.ಮುಂದುವರೆದ ಬಂದೋಬಸ್ತ್: ಕಳೆದೆರಡು ವಾರಗಳ ಹಿಂದಷ್ಟೇ ನಡೆದ ಘಟನೆಯಿಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಸಿಪಿಐ ಮಹಾಂತೇಶ ಲಂಬಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ನಿಯೋಜನೆ ಮಾಡಿದ್ದರು, ಯಾವುದೇ ಅಹಿತಕರ ಘಟನೆ ಮತ್ತೊಮ್ಮೆ ಮರುಕಳಿಸಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮಾರುಕಟ್ಟೆಯಲ್ಲಿನ ರೈತರು ಮತ್ತು ವ್ಯಾಪಾರಸ್ಥರು ನಿರಾತಂಕವಾಗಿ ವ್ಯಾಪಾರ ವಹಿವಾಟು ನಡೆಸಿದರು.

ಗುರುವಾರ ಮಾರುಕಟ್ಟೆ ದರ: ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ 2199 ಗರಿಷ್ಠ 32899 ಸರಾಸರಿ 28209, ಡಬ್ಬಿತಳಿ ಕನಿಷ್ಠ 2689 ಗರಿಷ್ಠ 38800 ಸರಾಸರಿ 34009, ಗುಂಟೂರ ತಳಿ ಕನಿಷ್ಠ 1089 ಗರಿಷ್ಠ 17699 ಸರಾಸರಿ 12209 ರು. ಗಳಿಗೆ ಮಾರಾಟವಾಗಿವೆ.