ಫೆಂಗಲ್‌ ಚಂಡಮಾರುತಕ್ಕೆ ರಾಜಧಾನಿ ಕಂಗಾಲು : ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್‌ ಉದ್ದ ನಿಂತ ವಾಹನ

| Published : Dec 04 2024, 01:30 AM IST / Updated: Dec 04 2024, 08:15 AM IST

bengaluru rain
ಫೆಂಗಲ್‌ ಚಂಡಮಾರುತಕ್ಕೆ ರಾಜಧಾನಿ ಕಂಗಾಲು : ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್‌ ಉದ್ದ ನಿಂತ ವಾಹನ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್‌ ಉದ್ದ ನಿಂತ ವಾಹನಗಳು, ಕೆಸರು ಗದ್ದೆಯಂತಾದ ಮಾರುಕಟ್ಟೆ- ವ್ಯಾಪಾರಿ ತಾಣಗಳು, ಜಿಟಿ ಜಿಟಿ ಮಳೆಯಿಂದ ಮನೆಯಿಂದ ಹೊರ ಹೋಗುವುದಕ್ಕೆ ಸಾಧ್ಯವಾಗ ಸ್ಥಿತಿ. ಇವು ಫೆಂಗಲ್‌ ಚಂಡಮಾರುತದಿಂದ ರಾಜಧಾನಿ ಬೆಂಗಳೂರಿನ ಜನರ ಸಂಕಷ್ಟಗಳ ಸರಮಾಲೆ.

 ಬೆಂಗಳೂರು : ರಸ್ತೆಗಳಲ್ಲಿ ಹರಿದ ಕೊಳಚೆ ನೀರು, ಕಿಲೋ ಮೀಟರ್‌ ಉದ್ದ ನಿಂತ ವಾಹನಗಳು, ಕೆಸರು ಗದ್ದೆಯಂತಾದ ಮಾರುಕಟ್ಟೆ- ವ್ಯಾಪಾರಿ ತಾಣಗಳು, ಜಿಟಿ ಜಿಟಿ ಮಳೆಯಿಂದ ಮನೆಯಿಂದ ಹೊರ ಹೋಗುವುದಕ್ಕೆ ಸಾಧ್ಯವಾಗ ಸ್ಥಿತಿ. ಇವು ಫೆಂಗಲ್‌ ಚಂಡಮಾರುತದಿಂದ ರಾಜಧಾನಿ ಬೆಂಗಳೂರಿನ ಜನರ ಸಂಕಷ್ಟಗಳ ಸರಮಾಲೆ.

ಕಳೆದ ಶನಿವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಂಗಳವಾರವೂ ನಗರದಲ್ಲಿ ಮಳೆ ಮುಂದುವರೆದಿತ್ತು. ಮಂಗಳವಾರ ಬೆಳಗ್ಗೆ ಕೆಲ ಸಮಯ ಸೂರ್ಯನ ದರ್ಶನವಾಯಿತು. ಆದರೆ, ಅರೆ ಕ್ಷಣದಲ್ಲಿ ಮೋಡ ಕವಿದು ಜಿಟಿ ಜಿಟಿ ಮಳೆ ಆರಂಭಗೊಂಡಿತ್ತು. ಮಧ್ಯಾಹ್ನದ ವೇಳೆಗೆ ನಗರದಾದ್ಯಂತ ಸುಮಾರು 20 ರಿಂದ 30 ನಿಮಿಷ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಆ ಬಳಿಕ ನಗರದಲ್ಲಿ ಮಳೆ ವಿರಾಮ ನೀಡಿತು.

ರಸ್ತೆಯಲ್ಲಿ ಪರದಾಟ:

ಮಳೆಯಿಂದ ನಗರದ ಪ್ರಮುಖ ರಸ್ತೆ, ಅಂಡರ್‌ ಪಾಸ್‌, ಫ್ಲೈಓವರ್‌ ಮೇಲೆ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಅದರಲ್ಲೂ ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಭಾರಿ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಯಿತು. ಇದರಿಂದ ಬೆಳಗ್ಗೆ ಶಾಲಾ-ಕಾಲೇಜಿಗೆ ಹೊರಡಲು ಮಕ್ಕಳು, ಕಚೇರಿಗೆ ಹೊರಡಲು ನೌಕರರು ನಡು ರಸ್ತೆಯಲ್ಲಿ ನಿಂತು ಪರದಾಡಬೇಕಾಯಿತು.

ರಸ್ತೆಯಲ್ಲಿ ಕೊಳಚೆ ನೀರು: ನಗರದ ಹಲವು ರಸ್ತೆಗಳ ಮೇಲೆ ಮಳೆ ನೀರು ಚರಂಡಿಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಕಂಡು ಬಂತು. ಇನ್ನು ಕೆಲವು ಕಡೆ ಜಲಮಂಡಳಿಯ ಕೊಳವೆ ಮಾರ್ಗದಲ್ಲಿ ಮಳೆ ನೀರು ಹರಿದ ಪರಿಣಾಮ ಒತ್ತಡ ಹೆಚ್ಚಾಗಿ ರಸ್ತೆ ಮಧ್ಯದಲ್ಲಿರುವ ಮ್ಯಾನ್‌ ಹೋಲ್‌ಗಳ ಮೂಲಕ ಹೊರಗೆ ಉಕ್ಕುತ್ತಿರುವುದು ಕಂಡು ಬಂತು.

ಕೆಸರು ಗದ್ದೆಯಾದ ಮಾರುಕಟ್ಟೆಗಳು: ಕೆ.ಆರ್‌.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿ ವಿವಿಧ ವ್ಯಾಪಾರಿ ತಾಣಗಳಾದ ಚಿಕ್ಕಪೇಟೆ, ಅವೆನ್ಯೂ ರಸ್ತೆ, ವಿಜಯನಗರ ಮಾರುಕಟ್ಟೆ, ಶಿವಾಜಿನಗರ, ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌, ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ರಸ್ತೆಗಳಲ್ಲಿ ಅಕ್ಷರಶಃ ಕೆಸರು ಗದ್ದೆಯಂತಾಗಿದ್ದವು. ಮಳೆಯ ನಡುವೆಯೂ ಹಳ್ಳಿಗಳಿಂದ ನಗರದ ಕೆ.ಆರ್‌.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿ ವಿವಿಧ ಮಾರುಕಟ್ಟೆಗಳಿಗೆ ಸೊಪ್ಪು-ತರಕಾರಿಯನ್ನು ತೆಗೆದುಕೊಂಡು ಬಂದಿದ್ದ ರೈತರ ಗೋಳು ಕೇಳುವವರಿಲ್ಲದಂತಾಗಿತ್ತು. ಮಳೆಯಿಂದ ಕೆಸರು ಗದ್ದೆಯಂತಾಗಿದ್ದ ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿ, ಹೂವು ಖರೀದಿ ಮಾಡುವವರಿಲ್ಲದೇ ಪರದಾಡಿದರು. ಕೊನೆಗೆ ಸೊಪ್ಪು, ತರಕಾರಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗುವ ಸ್ಥಿತಿ ಕೆ.ಆರ್‌. ಮಾರುಕಟ್ಟೆಯಲ್ಲಿ ಕಂಡು ಬಂತು.

ಧರೆಗೆ ಬಿದ್ದ ಮರದ ಕೊಂಬೆ: ಮಂಗಳವಾರದ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿ ಮರ ಕೊಂಬೆ ಬಿದ್ದಿದೆ. ಪಾದಚಾರಿ ಮಾರ್ಗದಲ್ಲಿ ಮರ ಕೊಂಬೆ ಬಿದ್ದಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಅನುಭವಿಸಿದರು. ಇನ್ನು ಕಳೆದ 4 ದಿನದ ಮಳೆಗೆ ನಗರದಲ್ಲಿ ಒಟ್ಟು 32 ಮರ ಹಾಗೂ 72 ಮರ ಕೊಂಬೆ ಬಿದ್ದ ವರದಿಯಾಗಿದೆ.

ಹೆಚ್ಚಾದ ಗುಂಡಿ ಸಮಸ್ಯೆ: ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ಮತ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಮುಖ್ಯ ರಸ್ತೆಗಳಲ್ಲಿಯೇ ಗುಂಡಿಗಳು ಮತ್ತೆ ಬಾಯಿದೆರೆದುಕೊಂಡಿದ್ದು, ವಾಹನ ಸವಾರರು, ಅದರಲ್ಲೂ ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ಕೋಲ್ಡ್‌ ಮಿಕ್ಸ್‌ ಬಳಕೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಎಲ್ಲಿಯೂ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಎಲ್ಲೆಲ್ಲಿ ಎಷ್ಟು ಮಳೆ: ಮಂಗಳವಾರ ಸಿಂಗಸಂದ್ರದಲ್ಲಿ ಅತಿ ಹೆಚ್ಚು 2.2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ದೊರೆಸಾನಿಪಾಳ್ಯ ಹಾಗೂ ವಿವಿ ಪುರದಲ್ಲಿ ತಲಾ 2.1, ವಿದ್ಯಾಪೀಠ 1.9, ಅರಕೆರೆ 1.8, ಆರ್‌ಆರ್ ನಗರ ಹಾಗೂ ಬಿಳೇಕಹಳ್ಳಿಯಲ್ಲಿ ತಲಾ 1.6, ದಯಾನಂದನಗರ ಹಾಗೂ ನಾಯಂಡಹಳ್ಳಿ 1.4, ಗೊಟ್ಟಿಗೆರೆ, ಕಾಟನ್‌ಪೇಟೆ ಹಾಗೂ ಚಾಮರಾಜಪೇಟೆಯಲ್ಲಿ ತಲಾ 1.2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ದೂರುಗಳೇ ಇಲ್ಲ: ಬಿಬಿಎಂಪಿ ಸುರೇಶ್‌ಕಳೆದ 4 ದಿನಗಳಿಂದ ನಗರದಲ್ಲಿ ನಿರಂತವಾಗಿ ಮಳೆ ಸುರಿದ ಪರಿಣಾಮ ಜಂಕ್ಷನ್‌, ಅಂಡರ್‌ ಪಾಸ್‌, ಫ್ಲೈಓವರ್‌ಗಳ ಮೇಲೆ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗಿವೆ. ಇನ್ನು ಹಲವು ಕಡೆ ಮರ ಹಾಗೂ ಮರದ ರೆಂಬೆ-ಕೊಂಬೆಗಳು ಧರೆಗುರುಳಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು, ಸಾಮಾಜಿಕ ಜಾಲತಾಣಗಳಲ್ಲಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಿಬಿಎಂಪಿಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಸುರೇಶ್‌ ಮಾತ್ರ ಮಳೆಯಿಂದ ನಗರದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಹೀಗಾಗಿ, ಬಿಬಿಎಂಪಿಗೆ ಯಾವುದೇ ದೂರು ಬಂದಿಲ್ಲ ಎಂಬ ಹೇಳುತ್ತಾರೆ.