ಸಾರಾಂಶ
ಧಾರವಾಡ:
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನವು ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆಯಿತು. ಧ್ವಜಾರೋಹಣ ಹಾಗೂ ಕಾರ್ಮಿಕ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.ಸಮ್ಮೇಳನ ಉದ್ಘಾಟಿಸಿದ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ, ರಾಜ್ಯ ಸರ್ಕಾರ ಕರ್ನಾಟಕ ಕಟ್ಟಡ ಕಾರ್ಮಿಕರ ಕಾಯ್ದೆ ರೂಪಿಸಿದ್ದು, ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಕಲ್ಯಾಣ ಮಂಡಳಿ ಸಹ ಸ್ಥಾಪಿಸಿದೆ. ಪ್ರಾರಂಭದಲ್ಲಿ ಕಾರ್ಮಿಕರಿಗೆ ಸಹಾಯವಾದರೂ ನಂತರದ ದಿನಗಳಲ್ಲಿ ಯಾವ ಪ್ರಯೋಜನವಾಗುತ್ತಿಲ್ಲ. ಮಂಡಳಿಯು ಏಕಪಕ್ಷೀಯ ನಿರ್ಧಾರಗಳ ಮೂಲಕ ಅನಾವಶ್ಯಕ, ಅಸಮಂಜಸ ಆರೋಗ್ಯ ತಪಾಸಣೆ, ದುಬಾರಿ ಲ್ಯಾಪ್‌ಟಾಪ್ ಹಾಗೂ ಕಳಪೆ ಕಿಟ್ ವಿತರಿಸುವ ಮೂಲಕ ಮಂಡಳಿಯ ಹಣ ಪೋಲು ಮಾಡುತ್ತಿದೆ ಎಂದು ಕಿಡಿಕಾರಿದರು.
ಹೆಚ್ಚುತ್ತಿರುವ ಬೋಗಸ್ ಕಾರ್ಡ್‌ಗಳು ಮಂಡಳಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್ ಹಣವನ್ನು ಶೇ. 60-80ರಷ್ಟು ಕಡಿತ ಮಾಡಿರುವುದರಿಂದ ಉನ್ನತ ಶಿಕ್ಷಣ ಮಾಡುತ್ತಿದ್ದ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣ ಕೈಬಿಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ ಎಂದರು.ಇಂದು ಕಾರ್ಮಿಕರ ಈ ದುಸ್ಥಿತಿಗೆ ಬಂಡವಾಳಶಾಹಿ ವ್ಯವಸ್ಥೆ ಕಾರಣವಾಗಿದೆ. ಲಾಭದ ಮೇಲೆ ನಿಂತಿರುವ ಈ ವ್ಯವಸ್ಥೆ, ಗರಿಷ್ಠ ಲಾಭಕ್ಕಾಗಿ ಕಾರ್ಮಿಕರನ್ನು ಶೋಷಿಸುತ್ತದೆ. ಅತ್ಯಂತ ಕಡಿಮೆ ಕೂಲಿ ಕೊಟ್ಟು ಅತಿ ಹೆಚ್ಚು ದುಡಿಸಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಮಿಕರ ಶ್ರಮಕ್ಕೆ ಬೆಲೆಯೇ ಇಲ್ಲ. ಹಾಗಾಗಿ ಕಾರ್ಮಿಕರು ಜೀವನದಲ್ಲಿ ನಿಜವಾದ ನೆಮ್ಮದಿ ಕಾಣುವುದೇ ಇಲ್ಲ. ಆಳುವ ಸರ್ಕಾರಗಳು ಕೂಡ ಕಾರ್ಮಿಕರನ್ನು ಬೀದಿಗೆ ತಳ್ಳಿ ಕೈಗಾರಿಕಾಪತಿಗಳ ಕೈ ಹಿಡಿಯುತ್ತವೆ. ಇಂತಹ ಸಂದರ್ಭದಲ್ಲಿ ಪ್ರಬಲ ಕಾರ್ಮಿಕರ ಚಳವಳಿ ರೂಪಿಸುತ್ತಾ, ಕಾರ್ಮಿಕ ಕ್ರಾಂತಿಗೆ ಸಜ್ಜಾಗಬೇಕಾದ ಅವಶ್ಯಕತೆಯಿದೆ. ಆಗ ಮಾತ್ರ ಕಾರ್ಮಿಕರು ತಮ್ಮ ಜೀವನದಲ್ಲಿ ಮೂಲಭೂತ ಬದಲಾವಣೆ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಸೋಮಶೇಖರ ಯಾದಗಿರಿ, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರ ಜೀವನ ಅಭದ್ರತೆಯಿಂದ ಕೂಡಿದೆ. ಬೆಲೆ ಏರಿಕೆ, ನಿರುದ್ಯೋಗ, ದುಬಾರಿ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ಮುಂತಾದ ಸಮಸ್ಯೆಗಳು ಕಾರ್ಮಿಕರ ಬದುಕನ್ನು ಯಾತನಮಯವಾಗಿಸಿವೆ. ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಕಾರ್ಮಿಕರು ಸಂಘಟಿತರಾಗಿ ಬಲಿಷ್ಠವಾದ ಹೋರಾಟ ಬೆಳೆಸಬೇಕು ಎಂದು ಕರೆ ನೀಡಿದರು.ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಎ. ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಸಂಘಟಕರಾದ ಷಣ್ಮುಗಂ ಪಿ.ಎಸ್, ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿದರು. ಕೊನೆಯಲ್ಲಿ ನೂತನ ರಾಜ್ಯ ಸಮಿತಿ ಚುನಾಯಿಸಲಾಯಿತು.
ಸಭೆಗೆ ಮುನ್ನ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಕಾರ್ಮಿಕರ ಪ್ರತಿನಿಧಿಗಳು ಕಲಾ ಭವನದಿಂದ ಘೋಷಣೆಗಳನ್ನು ಕೂಗಿ ಸರ್ಕಾರಿ ನೌಕರರ ಭವನದತ್ತ ಹೊರಟರು.