ಬಂಡವಾಳಶಾಹಿ, ಭೂ ಮಾಲೀಕರ ಪರವಿರುವ ರಾಜಕೀಯ ಪಕ್ಷಗಳು: ಸಿಪಿಐ(ಎಂ)ನ ಭರತ್ ರಾಜ್ ಅಭಿಪ್ರಾಯ

| Published : Oct 10 2024, 02:15 AM IST

ಬಂಡವಾಳಶಾಹಿ, ಭೂ ಮಾಲೀಕರ ಪರವಿರುವ ರಾಜಕೀಯ ಪಕ್ಷಗಳು: ಸಿಪಿಐ(ಎಂ)ನ ಭರತ್ ರಾಜ್ ಅಭಿಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬೆಳೆದ ಬೆಳೆಗಳಿಗೆ ತಗಲುವ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದಲ್ಲಿ 80 ಕೋಟಿ ಕೃಷಿಕರು ಇದ್ದಾರೆ, ಇವರ ಹೆಸರೇಳಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆದರೆ, ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಬಂಡವಾಳಶಾಹಿ ಭೂ ಮಾಲೀಕರ ಪರ ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿರುವುದರಿಂದ ಕೃಷಿಯನ್ನು ನಂಬಿ ರೈತರು ಸ್ವಾಭಿಮಾನ ಮತ್ತು ಘನತೆಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್. ಭರತ್ ರಾಜ್ ತಿಳಿಸಿದರು.

ಪಟ್ಟಣದ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಸಿಪಿಐ(ಎಂ) ಹಲಗೂರು ಶಾಖೆ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ರೈತರು ನೆಮ್ಮದಿಯಿಂದ ಬದುಕಲು ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದ ಬೆಳೆಗಳಿಗೆ ತಗಲುವ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದಲ್ಲಿ 80 ಕೋಟಿ ಕೃಷಿಕರು ಇದ್ದಾರೆ, ಇವರ ಹೆಸರೇಳಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆದರೆ, ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಇಂದು 10 ಎಕರೆ ಜಮೀನು ಉಳ್ಳಂತಹ ರೈತ ತನ್ನ ಮಗನನ್ನು ಮತ್ತೆ ರೈತನಾಗಲಿ ಎಂದು ಬಯಸುವುದಿಲ್ಲ. ಅದರ ಬದಲು ಸರ್ಕಾರಿ ಗುಮಾಸ್ತನಾಗಲು ಬಾಗಿಲು ಕಾಯುವ ಜವಾನನಾಗಲು ಬಯಸುತ್ತಾನೆಂದರೆ ಕೃಷಿಯಿಂದ ರೈತ ಎಷ್ಟೊಂದು ಬೇಸರ ಉಳ್ಳವನಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಹಸಿರು ಕ್ರಾಂತಿ ಮೂಲಕ ದೇಶದ ಜನಸಾಮಾನ್ಯರಿಗೆ ಆಹಾರ ನೀಡುವ ರೈತ ಹಲವು ಕೈಗಾರಿಕಾ ಅಭಿವೃದ್ಧಿಗೂ ಕಾರಣನಾಗಿದ್ದಾನೆ. ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ, ಟ್ರ್ಯಾಕ್ಟರ್, ಟಿಲ್ಲರ್, ಕೃಷಿ ಯಂತ್ರೋಪಕರಣಗಳು, ಡೀಸೆಲ್, ಪೆಟ್ರೋಲ್ ಮುಂತಾದವುಗಳೊಡನೆ ಕೃಷಿ ಸಂಬಂಧ ಅಡಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣ ಮಾಡಿ ಎಂಎಸ್ ಪಿ ನಿಗದಿಪಡಿಸಿ ರೈತರ ಆತ್ಮಹತ್ಯೆ ತಡೆಗಟ್ಟಲು ರೈತರ ಮಕ್ಕಳಿಗೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆಂದು ಹೇಳಿ ಜನರನ್ನು ವಂಚಿಸಿದ್ದಾರೆ. ಜನರ ಸಮಸ್ಯೆಗಳನ್ನು ಮರೆಮಾಚಲು ಕೋಮುವಾದಿ ಬಿಜೆಪಿ ಪ್ರತಿನಿತ್ಯ ದ್ವೇಷ, ಅಸೂಯೆ, ಅಸಹಕಾರ ಜನರಲ್ಲಿ ಬಿತ್ತಿ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಹಲಗೂರು ಶಾಖಾ ಕಾರ್ಯದರ್ಶಿ ಎ.ಎಲ್.ಶಿವಕುಮಾರ್ ಅದ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ) ನ ಜಿಲ್ಲಾ ಸಮಿತಿ ಸದಸ್ಯರಾದ ಎನ್.ಲಿಂಗರಾಜಮೂರ್ತಿ, ಮಂಜುಳ, ಪ್ರಮೀಳಾ ಮಹಾದೇವು, ಲಕ್ಷ್ಮೀ , ಸಣ್ಣಶೆಟ್ಟಿ, ಹೊನ್ನಪ್ಪ, ಗಣೇಶ್, ಮಹಾದೇವು ಉಪಸ್ಥಿತರಿದ್ದರು.