ಸಾರಾಂಶ
ಭಟ್ಕಳ: ತಾಲೂಕಿನ ಬೈಲೂರಿನಲ್ಲಿ ಶುಕ್ರವಾರ ಕಾರು ಅಪಘಾತವಾಗಿದ್ದು, ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಹಾಯಕ ಆಯುಕ್ತೆ ಕಾವ್ಯಾ ರಾಣಿ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.ಮಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಯುವಕರ ತಂಡವಿದ್ದ ಕಾರೊಂದು ಬೈಲೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತ್ತು. ಹೊನ್ನಾವರ ಕಡೆಗೆ ತೆರಳುತ್ತಿದ್ದ ಸಹಾಯಕ ಆಯುಕ್ತೆ ಕಾವ್ಯಾರಾಣಿ ಅಪಘಾತ ಕಂಡು ತಕ್ಷಣ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿ ತಮ್ಮದೇ ವಾಹನದಲ್ಲಿರುವ ಪ್ರಥಮ ಚಿಕಿತ್ಸೆ ಕಿಟ್ ಇಂದ ಗಾಯಾಳುಗಳನ್ನು ಉಪಚರಿಸಿದ್ದಾರೆ. ನಂತರ ತಾಲೂಕು ಆರೋಗ್ಯಾಧಿಕಾರಿ ಅವರಿಗೆ ಕರೆ ಮಾಡಿ ಆ್ಯಂಬುಲೆನ್ಸ್ ಸ್ಥಳಕ್ಕೆ ಕರೆಯಿಸಿ ಅಪಘಾತದಲ್ಲಿ ಗಾಯಗೊಂಡವರನ್ನು ಭಟ್ಕಳ ಟಿಎಚ್‌ಒಗೆ ಸಂಪರ್ಕಿಸಿ ಆ್ಯಂಬುಲೆನ್ಸ್ ಸ್ಥಳಕ್ಕೆ ಕರೆಸಿದರು. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಮಂಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯ ವಿಚಾರಿಸಿದರು.ಅಪಘಾತವಾದ ಕಾರಿನಲ್ಲಿ ಐದು ಮಂದಿ ಯುವಕರು ಇದ್ದು, ಒಬ್ಬರಿಗಷ್ಟೇ ಬೆನ್ನು ಭಾಗದಲ್ಲಿ ಸ್ವಲ್ಪ ಗಂಭೀರ ಗಾಯವಾಗಿದ್ದರೆ, ಇತರರು ಸಣ್ಣಪುಟ್ಟ ಗಾಯಗಳಾಗಿವೆ.
ಸಹಾಯಕ ಆಯುಕ್ತೆ ಕಾವ್ಯಾರಾಣಿ ತಕ್ಷಣ ಸ್ಪಂದಿಸಿ ಆಸ್ಪತ್ರೆಗೆ ಸೇರಿಸುವ ತನಕ ಸ್ಥಳದಲ್ಲಿಯೇ ನಿಂತು ಮಾನವೀಯತೆ ಮೆರೆದಿದ್ದು, ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಭಟ್ಕಳದ ಬೈಲೂರಿನಲ್ಲಿ ಕಾರೊಂದು ಅಪಘಾತವಾದ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಕಾವ್ಯರಾಣಿ ಸ್ಪಂದಿಸಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.