ಹಾಸನ ಬಳಿ ಕಾರು ಅಪಘಾತ: ಆರು ಮಂದಿ ನಿಧನ

| Published : May 27 2024, 01:11 AM IST

ಸಾರಾಂಶ

ದೊಡ್ಡಬಳ್ಳಾಪುರದ ಕಾರಹಳ್ಳಿ ಗ್ರಾಮದ ನಾರಾಯಣಪ್ಪಗೆ ಪಾರ್ಶ್ವವಾಯುವಾಗಿದ್ದು ಚಿಕಿತ್ಸೆಗೆಂದು ಅಂತ ಕಳೆದ ಶುಕ್ರವಾರ ಮಂಗಳೂರಿನತ್ತ ಪ್ರಯಾಣ ಬೆಳೆಸಿ, ಚಿಕಿತ್ಸೆ ಮತ್ತು ಔಷಧಿ ಪಡೆದು.‌ ಶನಿವಾರ ರಾತ್ರಿ ಮಂಗಳೂರು ತೊರೆದು ವಾಪಾಸ್ ಬರುವಾಗ ಭಾನುವಾರ ಬೆಳಗ್ಗೆ ಅಪಘಾತ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಾಸನ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರ ಕಂದಲಿ ಬಳಿ ಭಾನುವಾರ ಬೆಳಗ್ಗೆ 6. 30 ರಲ್ಲಿ ಕಾರು ಮಕ್ಕು ಲಾರಿ ನಡೆವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲ 6 ಮಂದಿಯೂ ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಪ್ಪ ಮತ್ತು ಸುನಂದಮ್ಮ ದಂಪತಿ ಹಾಗೂ ಸುನಂದಮ್ಮನ ತಂಗಿ ಹೊಸಕೋಟೆ ತಾಲೂಕು ಹಂದರಹಳ್ಳಿ ನಿವಾಸಿಗಳಾಗಿದ್ದು, ಬೆಂಗಳೂರಿನ ಹೊರಮಾವು ಬಳಿ ವಾಸವಾಗಿರುವ ನೇತ್ರಾ ಮತ್ತು ರವಿಕುಮಾರ್ ದಂಪತಿ ಹಾಗೂ ಇವರ 2 ವರ್ಷದ ಪುತ್ರ ಚೇತನ್ ಸೇರಿದಂತೆ ಕಾರು ಚಾಲಕ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ ಗ್ರಾಮದ ಗುಣಶೇಖರ್ ಎಂದು ಗುರುತಿಸಲಾಗಿದೆ.

ಮಂಗಳೂರಿಗೆ ತೆರಳಿದ್ದ ಕುಟುಂಬ

ಕಾರಹಳ್ಳಿ ಗ್ರಾಮದ ನಾರಾಯಣಪ್ಪಗೆ ಪಾರ್ಶ್ವವಾಯುವಾಗಿದ್ದು ಚಿಕಿತ್ಸೆಗೆಂದು ಅಂತ ಕಳೆದ ಶುಕ್ರವಾರ ಮಂಗಳೂರಿನತ್ತ ಪ್ರಯಾಣ ಬೆಳೆಸಿ, ಚಿಕಿತ್ಸೆ ಮತ್ತು ಔಷಧಿ ಪಡೆದು.‌ ಶನಿವಾರ ರಾತ್ರಿ ಮಂಗಳೂರು ತೊರೆದು ವಾಪಾಸ್ ಬರುವಾಗ ಭಾನುವಾರ ಬೆಳಗ್ಗೆ ಅಪಘಾತ ಸಂಭವಿಸಿದೆ.

ಮೃತ ನಾರಾಯಣಪ್ಪ ಸುನಂದಮ್ಮ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರ ಇದ್ದಾರೆ. ನೇತ್ರಾ ಮತ್ತು ರವಿಕುಮಾರ್ ದಂಪತಿಗೆ ಮೂವರು ಮಕ್ಕಳಿದ್ದು 2 ವರ್ಷದ ಮಗು ಅಪಘಾತದಲ್ಲಿ ಸತ್ತಿದೆ, ಮನೆಯಲ್ಲಿದ್ದ 6 ಮತ್ತು 9 ವರ್ಷದ ಇನ್ನಿಬ್ಬರು ಹೆಣ್ಣು ಮಕ್ಕಳು ಈಗ ಅನಾಥರಾಗಿದ್ದಾರೆ. ನಾರಾಯಣಪ್ಪ ಸುನಂದಮ್ಮ ಸಾವಿನಿಂದ ಕಾರಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದರೆ ಇವರನ್ನು ಕರೆದುಕೊಂಡ ಹೊರಟಿದ್ದ ಕಾರು ಚಾಲಕ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ಗ್ರಾಮದ ಗುಣಶೇಖರ್ ಸಾವು ಅವರ ತಂದೆ ತಾಯಿ ಮತ್ತು ಕುಟುಂಬದಲ್ಲಿ ದುಃಖದಲ್ಲಿ ಮುಳುಗಿದೆ.

ಶಾಸಕ ಪ್ರದೀಪ್‌ ಈಶ್ವರ್‌ ನೆರವು

ಅಪಘಾತದಲ್ಲಿ ಮೃತಪಟ್ಟ ರವಿಕುಮಾರ್‌ ಮತ್ತು ನೇತ್ರಾ ದಂಪತಿಯ ಇನ್ನಿಬ್ಬರು ಹೆಣ್ಣು ಮಕ್ಕಳಿಗೆ ನೆರವು ನೀಡುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ. ಅನಾಥರಾದ ಈ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲೂ ತಲಾ ಒಂದು ಲಕ್ಷ ರು.ಗಳನ್ನು ಠೇವಣಿ ಇಡಲಾಗುವುದು. ಮುಂದೆ ಅವರ ವಿದ್ಯಾಭ್ಯಾಸ ಮತ್ತು ಮದುವೆ ಮಾಡಿಸುವ ಜವಾಬ್ದಾರಿಯನ್ನು ಶಾಸಕರೇ ವಹಿಸಿಕೊಂಡಿದ್ದಾರೆ.