ಡಿವೈಡರ್‌ಗೆ ಕಾರ್ ಡಿಕ್ಕಿ: ಬಿಜೆಪಿ ನಾಯಕಿಯ ಮೊಮ್ಮಗ ಸಾವು

| Published : Mar 24 2024, 01:33 AM IST

ಸಾರಾಂಶ

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಕಾರಿನ ಮುಂಭಾಗ ಯಾವುದು ಎಂದು ತಿಳಿಯಲಾಗದಷ್ಟು ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ 76ರ ನಂತೂರಿನಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪ್ಪಚ್ಚಿಯಾದ ಭೀಕರ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ತೊಕ್ಕೊಟ್ಟಿನ ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದ‌ರ್ ಅವರ ಮೊಮ್ಮಗ ಬಲಿಯಾಗಿದ್ದಾನೆ.ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ(29) ಯಾನೆ ಬಂಟಿ ಸಾವಿಗೀಡಾದ ದುರ್ದೈವಿ ಯುವಕ. ಶಮಿತ್ ಶುಕ್ರವಾರ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಕಾರಿನ ಮುಂಭಾಗ ಯಾವುದು ಎಂದು ತಿಳಿಯಲಾಗದಷ್ಟು ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿತ್ತು. ಮರುದಿನ ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿದೆ. ಘಟನೆ ಕುರಿತು ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಲಿತಾ ಸುಂದರ್ ಅವರು ಬಿಜೆಪಿಯ ಹಿರಿಯ ನಾಯಕಿಯಾಗಿದ್ದು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಆಶೀರ್ವಾದ್‌ ಕಾಂಪ್ಲೆಕ್ಸ್ ಹೆಸರಿನ ಬೃಹತ್ ವಾಣಿಜ್ಯ ಕಟ್ಟಡ ಮತ್ತು ಹೊಟೇಲ್ ಹೊಂದಿದ್ದಾರೆ. ಲಲಿತಾ ಅವರ ಏಕೈಕ ಪುತ್ರ ಸಂತೋಷ್ ಯಾನೆ ಸಂತು ಕೆಲವು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. ಮೊಮ್ಮಗ ಶಮಿತ್ ಬಾಲ್ಯದಿಂದಲೇ ತಾಯಿ, ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದ. ಶಮಿತ್ ಮದುವೆ ಮಾಡಲು ವಧುವಿನ ಅನ್ವೇಷಣೆಯನ್ನೂ ಪೋಷಕರು ನಡೆಸುತ್ತಿದ್ದರು.ಮೃತ ಶಮಿತ್ ತಾಯಿ, ಸಹೋದರಿ, ಅಜ್ಜಿಯನ್ನು ಅಗಲಿದ್ದಾರೆ. ಶಮಿತ್ ಅವರ ಅಕಾಲಿಕ ಅಗಲಿಕೆಗೆ ಬಿಜೆಪಿ ಜಿಲ್ಲಾ ಮತ್ತು ಮಂಗಳೂರು ಮಂಡಲದ ಮುಖಂಡರು ಶೋಕ ವ್ಯಕ್ತ ಪಡಿಸಿದ್ದಾರೆ.