ರೈಲ್ವೆ ಸೇತುವೆಗೆ ಕಾರು ಡಿಕ್ಕಿ; ಒಂದೇ ಕುಟುಂಬದ ಮೂವರು ಸಾವು

| Published : Apr 11 2025, 12:35 AM IST

ಸಾರಾಂಶ

ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾದ ಗೋಪಾಲ್ (60), ಶಶಿಕಲಾ (55), ದೀಪ (35) ಮೃತಪಟ್ಟವರಾಗಿದ್ದು, ಮೃತ ದೀಪಾರ ಮಕ್ಕಳಾದ ಭುವನ್ (04), ಆದ್ಯ (01) ಗಂಭೀರ ಗಾಯಗೊಂಡಿದ್ದಾರೆ.

ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ । ಘಟನಾ ಸ್ಥಳಕ್ಕೆ ಎಸ್ ಪಿ ಸಿ.ಕೆ.ಬಾಬಾ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ ಚಲಿಸುತ್ತಿದ್ದಾಗ ಕಾರಿನ ನಿಯಂತ್ರಣ ತಪ್ಪಿ ರೈಲ್ವೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಅಂಚೆಮನೆ ಬಳಿ ನಡೆದಿದೆ.

ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾದ ಗೋಪಾಲ್ (60), ಶಶಿಕಲಾ (55), ದೀಪ (35) ಮೃತಪಟ್ಟವರಾಗಿದ್ದು, ಮೃತ ದೀಪಾರ ಮಕ್ಕಳಾದ ಭುವನ್ (04), ಆದ್ಯ (01) ಗಂಭೀರ ಗಾಯಗೊಂಡಿದ್ದಾರೆ.

ಘಟನಾ ವಿವರ: ಏ.10 ರಂದು ಗುರುವಾರ ಬೆಳಗ್ಗೆ 10.30ಕ್ಕೆ ಸಂಬಂಧಿಕರ ನಾಮಕರಣ ಕಾರ್ಯಕ್ರಮದ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಬೆಂಗಳೂರು ಮಾರ್ಗವಾಗಿ ಮಾರುತಿ ಸುಝುಕಿ ಸೆಲ್ಯೂರಿಯಾ ಕಾರಿನಲ್ಲಿ ಒಂದೇ ಕುಟುಂಬದ ಐದು ಜನ ತುಮಕೂರು ಕಡೆಗೆ ಹೋಗುತ್ತಿದ್ದಾಗ ದಾಬಸ್‍ಪೇಟೆ ಬಳಿಯ ಅಂಚೆಮನೆ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಅಲ್ಲೇ ಪಕ್ಕದಲ್ಲೇ ಇದ್ದ ರೈಲ್ವೆ ಸೇತುವೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನ ಮುಂದೆ ಕುಳಿತಿದ್ದ ದೀಪಾ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಶಶಿಕಲಾ ಮೃತಪಟ್ಟಿದ್ದು, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಗೋಪಾಲ್ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಸಿಕೆ ಬಾಬಾ, ಎಎಸ್ಪಿ ನಾಗೇಶ್ ಕುಮಾರ್, ಡಿವೈಎಸ್ಪಿ ಜಗದೀಶ್, ಟ್ರಾಫಿಕ್ ಇನ್ಸಪೆಕ್ಟರ್ ರವಿ, ವಿಧಿ-ವಿಜ್ಞಾನ ಪ್ರಯೋಗಾಲಯದ ತಂಡದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.