ಸಿದ್ದಾಪುರ: ಇಲ್ಲಿಗೆ ಸಮೀಪದ ಬಾಣಂಗಾಲ ಗ್ರಾಮದಲ್ಲಿ ಕಾರೊಂದು ಕೆರೆಗೆ ಬಿದ್ದು, ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿರುವ ದಾರುಣ ಘಟನೆ ಮಂಗ‍ಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ದಂಪತಿ ಹಾಗೂ ನಾಲ್ಕು ವರ್ಷದ ಮಗು ಮೃತಪಟ್ಟಿದ್ದು ಸಿದ್ದಾಪುರ ಭಾಗದಲ್ಲಿ ಶೋಕದ ಛಾಯೆ ಆವರಿಸಿದೆ.

ಸಿದ್ದಾಪುರ ಹೈಸ್ಕೂಲ್ ಪೈಸರಿ ನಿವಾಸಿಗಳಾದ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ನಾಲ್ಕು ವರ್ಷದ ಪುತ್ರಿ ಲಿಯಾ ಮೃತ ದುರ್ದೈವಿಗಳು. ವಿಜೇಶ್ ಅವರು ಪತ್ನಿ ಹಾಗೂ ಪುತ್ರಿಯೊಂದಿಗೆ ಸಿದ್ದಾಪುರದಿಂದ ಬಾಣಂಗಾಲ ಗ್ರಾಮದ ತಾವು ಕೆಲಸ ಮಾಡುತ್ತಿದ್ದ ಎಲ್‌ಕ್ಕಿಲ್ ತೋಟದ ಮನೆಗೆ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತೋಟದ ಒಳಭಾಗದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ರಾತ್ರಿ ವೇಳೆ ಈ ದುರ್ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಆದರೆ, ಅಪಘಾತ ಸಂಭವಿಸಿದ ತಕ್ಷಣ ಘಟನೆ ಯಾರ ಗಮನಕ್ಕೂ ಬಂದಿರಲಿಲ್ಲ. ಬುಧವಾರ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದವರು ಕಾರು ಹಾಗೂ ಅದರೊಳಗಿದ್ದ ಮೂವರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತದೇಹಗಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬದವರ ಆಕ್ರಂದನ: ಒಂದೇ ಕುಟುಂಬದ ಮೂವರು ದುರಂತ ಸಾವಿಗೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಧಾವಿಸಿದರು. ಪತಿ, ಪತ್ನಿ ಹಾಗೂ ಪುಟ್ಟ ಮಗಳನ್ನು ಒಟ್ಟಿಗೇ ಕಳೆದುಕೊಂಡ ದುರ್ಘಟನೆ ಸ್ಥಳೀಯರನ್ನು ತೀವ್ರ ದುಃಖಕ್ಕೆ ತಳ್ಳಿದೆ. ನಗುನಗುತ್ತಾ ಬದುಕಬೇಕಿದ್ದ ಪುಟ್ಟ ಕುಟುಂಬವೊಂದು ದುರಂತದಲ್ಲಿ ಅಂತ್ಯಗೊಂಡಿರುವುದು ನಾಗರಿಕರ ಮನ ಕಲುಕಿದೆ.