ಬೇಲೂರು: ವಾಹನ ಚಲಾಯಿಸುತ್ತಿದ್ದ ವೇಳೆ ಮೊಬೈಲ್ ಫೋನ್ ರಿಂಗ್ ಆಗಿದ್ದನ್ನು ಗಮನಿಸಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ವಾಹನ ಜಖಂಗೊಂಡ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ನಡೆದಿದೆ.ಬೇಲೂರಿನತ್ತ ಸಾಗುತ್ತಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ. ಅದೃಷ್ಟವಶಾತ್ ವಾಹನ ಚಾಲಕ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಕೆರೆ ಇದ್ದು, ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಇರದೇ ಹೋಗಿದ್ದರೆ ಕಾರು ನೇರವಾಗಿ ಕೆರೆಗೆ ಬಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.