ನಗರದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋರೂಂನಲ್ಲಿ ಗುರುವಾರ ಸಂಜೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋರೂಂನಲ್ಲಿ ಗುರುವಾರ ಸಂಜೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುರುವಾರ ಸಂಜೆ ಸುಮಾರು 5.25ರ ವೇಳೆಗೆ ಶೋರೂಮ್‌ನ ಮುಂಭಾಗದಲ್ಲಿರುವ ನೇಮ್ ಪ್ಲೇಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ತೀವ್ರತೆಗೆ ನೇಮ್ ಪ್ಲೇಟ್ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿವೆ. ಶೋ ರೂಂನಲ್ಲಿ ಬೆಂಕಿ ನೋಡಿದ ಸ್ಥಳೀಯರು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೆಲವು ಕಾರುಗಳನ್ನು ಹೊರ ತೆಗೆಯಲಾಗಿದೆ. ಅಲ್ಲದೆ, ಶೋರೂಂ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದಾರೆ.ಕೆಲವು ಕಾಲ ಶೋ ರೂಮ್ ಒಳಗೂ ದಟ್ಟ ಹೊಗೆ ಆವರಿಸಿದ ಪರಿಣಾಮ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಎರಡು ವರ್ಷಗಳ ಹಿಂದೆ ಇದೇ ಶೋರೂಂನಲ್ಲಿ ಭೀಕರ ಅಗ್ನಿ ಅವಘಡ ನಡೆದಿತ್ತು. 2024ರಲ್ಲಿ ಇದೇ ಶೋರೂಮ್‌ನಲ್ಲಿ ರಾತ್ರಿ ವೇಳೆ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಸರ್ವಿಸ್‌ಗೆ ಇಟ್ಟಿದ್ದ ಕಾರುಗಳು ಹಾಗೂ ಶೋರೂಮ್‌ನಲ್ಲಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಬೆಂಕಿಯ ತೀವ್ರತೆಗೆ ಹಲವು ವಾಹನಗಳು ಸುಟ್ಟು ಕರಕಲಾಗಿದ್ದವು. ಘಟನೆಯಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿತ್ತು.