ಮನೆಯಲ್ಲಿಯೇ ಕಸ ವಿಂಗಡನೆಗೆ ಕಾರ್ಡ್ ವಿತರಣೆ

| Published : Jul 05 2024, 12:48 AM IST

ಸಾರಾಂಶ

ಕಸ ವಿಂಗಡಣೆ ಸಂಬಂಧ ಚಿತ್ರದುರ್ಗ ನಾಗರಿಕರಿಗೆ ಕಾರ್ಡ ವಿತರಣೆ ಮಾಡುತ್ತಿರುವ ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ ನಗರಸಭೆಯಿಂದ ವಿನೂತನ ಪ್ರಯೋಗ । ರಾಜ್ಯದಲ್ಲಿಯೇ ಮೊದಲ ಪ್ರಯತ್ನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಸ ವಿಂಗಡಣೆಗಾಗಿ ನಿವಾಸಿಗಳಿಗೆ ಕಾರ್ಡ ವಿತರಿಸಿ ಆ ಮೂಲಕ ನಿರ್ವಹಣೆ ಮಾಡುವ ವಿನೂತನ ಪ್ರಯತ್ನಕ್ಕೆ ಚಿತ್ರದುರ್ಗ ನಗರಸಭೆ ಮಂದಾಗಿದ್ದು ಇದು ರಾಜ್ಯದಲ್ಲಿಯೇ ಪ್ರಥಮ ಎನ್ನಲಾಗಿದೆ. ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಹಾಗೂ ಅದನ್ನು ದಾಖಲು ಮಾಡಲು ಮಾಡಲು ಕಾರ್ಡ್ ಬಳಸಲಾಗುತ್ತದೆ.

ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಪ್ರತಿ ಮನೆಗಳಿಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ, ನಗರಸಭೆಯ ವಾಹನಗಳಿಗೆ ನೀಡುವ ಬಗ್ಗೆ ಸ್ವಚ್ಛ ಸರ್ವೇಕ್ಷಣೆ-2024ರ ಅಂಗವಾಗಿ ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಿಸುವ ವಿನೂತನ ಪ್ರಯೋಗ ಇದಾಗಿದೆ. ಪ್ರಾಯೋಗಿಕವಾಗಿ ನಾಲ್ಕು ತಿಂಗಳ ಅವಧಿಗೆ ಕಾರ್ಡ್ ಮುದ್ರಿಸಿ ವಿತರಿಸಲಾಗಿದೆ.*ಕಾರ್ಡ್ ನಲ್ಲಿ ಏನಿರುತ್ತೆ: ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಅಡಿ ಬರಹದ ಈ ಕಾರ್ಡ್‌ನಲ್ಲಿ ಐದು ಕಾಲಂಗಳಿವೆ. ದಿನಾಂಕ, ಕಸ ವಿಂಗಡಿಸಿ ನೀಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ನಮೂದಿಸಿರುವ, ಮನೆ ಮಾಲೀಕರು ಹಾಗೂ ವಾಹನ ಚಾಲಕರ ಸಹಿ ಒಳಗೊಂಡ ಕಾರ್ಡ್ ಇದಾಗಿದೆ.

ಕಸ ವಿಂಗಡಿಸಿ ನೀಡುತ್ತಿರುವುದರ ಬಗ್ಗೆ ಮನೆ ಮಾಲೀಕರೇ ಹೌದು ಅಥವಾ ಇಲ್ಲವೇ ಎಂಬುದ ನಮೂದಿಸಿ ಸಹಿ ಮಾಡಬೇಕು. ನಂತರ ಇದಕ್ಕೆ ವಾಹನ ಚಾಲಕ ಸಹಿ ಮಾಡುತ್ತಾರೆ. ನಿತ್ಯದ ಈ ಪ್ರಕ್ರಿಯೆ ದಾಖಲಾತಿ ಸ್ವರೂಪ ಪಡೆದುಕೊಳ್ಳುತ್ತದೆ. ಪ್ರತಿ ಮನೆಗೂ ನಗರಸಭೆ ವತಿಯಿಂದ ಡಸ್ಟ್‌ಬಿನ್ ವಿತರಿಸಲಾಗಿದ್ದು, ಇದರಲ್ಲಿಯೇ ಹಸಿ ಹಾಗೂ ಒಣ ಕಸ ಸಂಗ್ರಹಿಸಿ ಮನೆ ಬಾಗಿಲಿಗೆ ವಾಹನ ಬಂದಾಗ ಅದರಲ್ಲಿ ಹಾಕಲಾಗುತ್ತದೆ. ತಿಂಗಳು ಮುಕ್ತಾಯವಾದ ನಂತರ ಎಷ್ಟು ದಿನ ವಿಂಗಡಣೆ ಮಾಡಿ ನೀಡಲಾಗಿದೆ ಎಂಬ ಸಂಖ್ಯೆ ಸಿಗುತ್ತದೆ. ನಂತರ ಇದರ ಆಧಾರದ ಮೇಲೆ ಮನೆ ಮಾಲೀಕರಿಗೆ ಎಚ್ಚರಿಸುವ ಕೆಲಸವಾಗುತ್ತದೆ.ಏಪ್ರಿಲ್ ತಿಂಗಳಲ್ಲಿ ವಾರ್ಡ್ ನಂ.9 ರಿಂದ 17 ವರೆಗೆ ಒಟ್ಟು9 ವಾರ್ಡ್‍ಗಳಲ್ಲಿ ಬರುವ ಎಲ್ಲಾ ಮನೆಗಳಿಗೂ ಕಾರ್ಡ ಹಂಚಲಾಗಿದ್ದು ಪ್ರತಿನಿತ್ಯ ಪರಿಶೀಲನೆ ನಡೆಸಲಾಗುತ್ತಿದೆ. ಯೋಜನೆ ಯಶ ಕಂಡು ಇತರೆ ವಾರ್ಡ್‍ಗಳಿಗೆ ಅನ್ವಯಿಸಿಲು ಯೋಚಿಸಿ, ಮೇ ತಿಂಗಳಲ್ಲಿ ವಾರ್ಡ್ ನಂ.5, 6, 7, 24, 25, 26, 27 ಒಟ್ಟು 7 ವಾರ್ಡ್‌ನ ಮನೆಗಳಿಗೂ ಹಂಚಿ ಒಟ್ಟು16 ವಾರ್ಡ್‍ಗಳಿಗೆ ನಾಲ್ಕು ತಿಂಗಳ ಕಾರ್ಡ್‌ ಹಂಚಲಾಗಿದೆ. ಚಿತ್ರದುರ್ಗ ನಗರಸಭೆ ವ್ಯಾಪ್ತಿಯ 35 ವಾರ್ಡ್‍ಗಳಿಗೂ ಈ ಸೌಲಭ್ಯ ನೀಡಲು ಜುಲೈ ತಿಂಗಳು ನಿಗಧಿ ಮಾಡಲಾಗಿದೆ.

ಪ್ರತಿನಿತ್ಯವೂ ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ನಗರಸಭೆಯ ವಾಹನಗಳಿಗೆ ನೀಡಿ, ತಮಗೆ ವಿತರಿಸಿರುವ ಕಾರ್ಡ್‍ಗಳಲ್ಲಿ ದಾಖಲಿಸಲು ಮನವಿ ಮಾಡಿದೆ. ಒಂದು ವೇಳೆ ನಗರಸಭೆಯ ವಾಹನ ಪ್ರತಿ ದಿನ ಅಥವಾ 2 ದಿನಕ್ಕೊಮ್ಮೆ ನಿರಂತರವಾಗಿ ಬರುತ್ತಿರುವ ಬಗ್ಗೆ ಸಹ ಈ ಕಾರ್ಡ್‍ನಲ್ಲಿ ಮನೆಯ ಮಾಲೀಕರ ಸಹಿ ಹಾಕುವುದರಿಂದ ತಿಳಿದುಬರುತ್ತದೆ. ಎರಡ್ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಗೆ ನಗರಸಭೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ನಿರೀಕ್ಷಕರು ಅರಿವು ಮೂಡಿಸಲು ಸೂಚಿಸಲಾಗಿರುತ್ತದೆ. ಆ ನಂತರವೂ ಸಾರ್ವಜನಿಕರು ಕಸವನ್ನು ವಿಂಗಡಿಸಿ ನಗರಸಭೆಯ ವಾಹನಗಳಿಗೆ ನೀಡದೇ ಇದ್ದರೆ, ದಂಡ ವಿಧಿಸಲು ಚಿಂತಿಸಲಾಗಿರುತ್ತದೆ.

ಚಿತ್ರದುರ್ಗ ನಗರವು ಐತಿಹಾಸಿಕ ನಗರವಾಗಿದ್ದು, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿನಿತ್ಯ ಮನೆ, ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗೆ, ಚರಂಡಿಗೆ ಹಾಕದೇ ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ವಾಹನ ಮನೆ ಬಾಗಿಲಿಗೆ ಬಂದಾಗ ನೀಡಲು ಪ್ರತಿ ನಿತ್ಯ ಕಸದ ವಾಹನಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೂ ಸಹ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡದೇ ರಸ್ತೆ, ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಎಸೆಯುತ್ತಿರುವುದು ಕಂಡುಬಂದಿರುತ್ತದೆ. ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡಿದರೆ, ಚಿತ್ರದುರ್ಗ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ಎಂ.ರೇಣುಕಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.