ಹುಣಶ್ಯಾಳ ಪಿವೈದಲ್ಲಿ ಕಾಳಜಿ ಕೇಂದ್ರ ಆರಂಭ

| Published : Jul 28 2024, 02:00 AM IST

ಸಾರಾಂಶ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ತಾಲೂಕು ಆಡಳಿತ ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ತಾಲೂಕು ಆಡಳಿತ ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರ ಆರಂಭಿಸಿದೆ.

ಗ್ರಾಮದ ಹಳೇ ಊರಿಗೆ ಪ್ರವಾಹ ಆವರಿಸಿದ್ದರಿಂದ ಅಲ್ಲಿರುವ 60 ಕುಟುಂಬಗಳ ಪೈಕಿ 30 ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ 25 ಕುಟುಂಬಗಳಿಗೆ ಶಾಲೆಯಲ್ಲಿ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಜನ ಹಾಗೂ ಜಾನುವಾರುಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ತ ಕುಟುಂಬಗಳ ಬಗ್ಗೆ ಕಾಳಜಿ ಹೊಂದಿದ್ದು, ಕುಟುಂಬದ ಸದಸ್ಯರಂತೆ ನೋಡಿಕೊಳ್ಳವ ಮನೋಭಾವ ಹೊಂದಿದ್ದಾರೆ ಎಂದು ಹುಣಶ್ಯಾಳ ಪಿವೈ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಭಾಸ್ಕರ್ ರಾವ್, ತಹಸೀಲ್ದಾರ ಮಹಾದೇವ ಸನಮುರಿ, ಬಿಇಒ ಅಜೀತ ಮನ್ನಿಕೇರಿ, ಮುಖಂಡ ಗೋಪಾಲ ಬಿಳ್ಳೂರ, ಜಂಬು ಚಿಕ್ಕೋಡಿ, ಹಣಮಂತ ಬಿಳ್ಳೂರ, ಗ್ರಾಪಂ ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಸದಸ್ಯರಾದ ಪ್ರಕಾಶ ಪಾಟೀಲ, ಪ್ರಕಾಶ ಯಡವಿನ್ನವರ, ಬಸು ಬಿಳ್ಳೂರ, ವಿಠ್ಠಲ ಚೌಗಲಾ, ಮಾರುತಿ ಮೇತ್ರಿ, ಮಂಜು ಉತ್ತೂರ, ಸಿದ್ದಪ್ಪ ಡೊಂಬರ, ಪಿಡಿಒ ಉದಯ ಬೆಳ್ಳುಂಡಗಿ, ಗ್ರಾಮ ಆಡಳಿತಾಧಿಕಾರಿ ಸಂಜು ಅಗ್ನೆಪ್ಪಗೋಳ, ಶಾಲೆಯ ಮುಖ್ಯಶಿಕ್ಷಕ ಭಡಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರವಾಹದಿಂದಾಗಿ ಸುರಕ್ಷತಾ ದೃಷ್ಟಿಯಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಿದ್ದರಿಂದ ಪ್ರವಾಹಕ್ಕೆ ನದಿ ದಡದ ಗ್ರಾಮಗಳು ಸಿಲುಕಿವೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಬಾಲಚಂದ್ರ ಜಾರಕಿಹೊಳಿ ಶಾಸಕರು, ಅರಭಾವಿ