ಸಾರಾಂಶ
- ಕನ್ನಡ ವೃತ್ತಿ ರಂಗಭೂಮಿ- ರಾಜ್ಯೋತ್ಸವ ಕಾರ್ಯಕ್ರಮ ಮಲ್ಲಿಕಾರ್ಜುನ ಕಡಕೋಳ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ವೃತ್ತಿ ರಂಗಭೂಮಿ ಬಗ್ಗೆ ಸಾಹಿತ್ಯ ಚರಿತ್ರೆಯಲ್ಲಿ ಹೆಚ್ಚು ವಿಷಯ ದಾಖಲಾಗಿಲ್ಲ. ಈ ಹಿನ್ನೆಲೆ ಕನ್ನಡ ಸಾಹಿತ್ಯ ಚರಿತ್ರೆ ಬರೆದಿರುವ ಒಂದು ವರ್ಗದ ಬಗ್ಗೆ ತುಂಬಾ ಬೇಸರವಿದೆ ಎಂದು ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ವೃತ್ತಿ ರಂಗಭೂಮಿ ರಂಗಾಯಣ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಧಾರವಾಡದ ಸಕ್ಕರಿ ಬಾಳಾಚಾರ್ಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ವೃತ್ತಿ ರಂಗಭೂಮಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೃತ್ತಿ ರಂಗಭೂಮಿ ಮತ್ತು ತತ್ವಪದಗಳಿಗೆ ಅನೂಚಾನವಾಗಿ ಅನ್ಯಾಯ ಮಾಡಲಾಗಿದೆ. ಸಾಹಿತ್ಯ ಚರಿತ್ರೆ ಕುರಿತು ನೂರಾರು ಸಂಪುಟಗಳು ಹೊರಬಂದಿವೆ. ಆದರೆ ವರ್ಷಕ್ಕೆ 18 ಸಾವಿರ ನಾಟಕಗಳನ್ನು ಪ್ರದರ್ಶನ ಮಾಡುವ ವೃತ್ತಿ ರಂಗಭೂಮಿಯ ಕುರಿತು ಒಂದೇ ಒಂದು ಸಂಪುಟ ಇದುವರೆಗೂ ಹೊರಬರಲಿಲ್ಲ. ಈ ರೀತಿಯ ಅಪಸವ್ಯಗಳು ವೃತ್ತಿರಂಗಭೂಮಿಗೆ ಸಂಬಂಧಿಸಿದಂತೆ ಹೆಚ್ಚಾಗಿ ನಡೆದಿವೆ. ಸಾಹಿತ್ಯ ಚರಿತ್ರೆಯಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಅಭಿಪ್ರಾಯಿಸಿದರು.ರಾಜ್ಯ ಸರ್ಕಾರ ಪ್ರತಿ ವರ್ಷ ನ.14ರಂದು ವೃತ್ತಿ ರಂಗಭೂಮಿ ದಿನ ಆಚರಿಸಲು ಮುಂದಾಗಬೇಕು. ಕನ್ನಡ ನಾಡಿನಲ್ಲಿ 1871ರ ನ.14ರಂದು ಮೊದಲ ಬಾರಿಗೆ ನಾಟಕ ಮೇಳ ಉದಯವಾಗಿತ್ತು. ಆ ವಿಶೇಷ ದಿನದ ಸ್ಮರಣಾರ್ಥ ವೃತ್ತಿ ರಂಗಭೂಮಿ ದಿನಾಚರಣೆಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ.ಮಲ್ಲಿಕಾರ್ಜುನ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವೃತ್ತಿ ರಂಗಭೂಮಿ ಸಿನಿಮಾ ಜಗತ್ತಿಗೆ ಜನನ ನೀಡಿದೆ. ಡಾ. ರಾಜಕುಮಾರ್ ಅಂತಹ ನಟರೂ ವೃತ್ತಿ ರಂಗಭೂಮಿಯಿಂದಲೇ ಬಂದವರಾಗಿದ್ದಾರೆ ಎಂದರು.ಪ್ರಾಚಾರ್ಯ ಡಾ. ಎಂ.ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಶೃತಿರಾಜ್, ಐಕ್ಯೂಎಸಿ ಸಂಚಾಲಕ ಡಾ. ಎಂ.ಪಿ. ಭೀಮಪ್ಪ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜಿ.ಕಾವ್ಯಶ್ರೀ, ಡಾ. ಭಾರತಿ, ಡಾ. ಎನ್.ಎಂ. ಅಶೋಕ್ ಕುಮಾರ್, ಗೋವಿಂದ ಸ್ವಾಮಿ ಇತರರು ಇದ್ದರು.
- - -ಕೋಟ್ ಅಂದು ಮರಾಠಿ ಭಾಷೆ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದವು. ಇದನ್ನು ಕಂಡು ಸಕ್ಕರಿ ಬಾಳಾಚಾರ್ಯರು ಕನ್ನಡಿಗರಲ್ಲಿ ಕನ್ನಡಪ್ರಜ್ಞೆ ಜಾಗೃತಗೊಳಿಸಿದರು. ಈ ನಿಟ್ಟಿನಲ್ಲಿ ಕನ್ನಡದಲ್ಲಿ 70ಕ್ಕೂ ಅಧಿಕ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶಿಸುವ ಜತೆಗೆ ನಾಟಕ ಕಂಪನಿ ಕಟ್ಟುದವರಲ್ಲಿ ಮೊದಲಿಗರಾಗಿದ್ದಾರೆ
- ಮಲ್ಲಿಕಾರ್ಜುನ ಕಡಕೋಳ, ನಿರ್ದೇಶಕ, ರಂಗಭೂಮಿ ರಂಗಾಯಣ- - - -15ಕೆಡಿವಿಜಿ36:
ದಾವಣಗೆರೆಯಲ್ಲಿ ನಡೆದ ಕನ್ನಡ ವೃತ್ತಿ ರಂಗಭೂಮಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಕಡಕೋಳ ಉದ್ಘಾಟಿಸಿದರು.