ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಎಚ್.ಕಾಂತರಾಜ್ ಹೇಳಿದರು.
ಹಾವೇರಿ: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಎಚ್.ಕಾಂತರಾಜ್ ಹೇಳಿದರು.
ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಾಡಳಿತ ಇಲಾಖೆ, ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪೌರ ಕಾರ್ಮಿಕರು ಪ್ರತಿದಿನ ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಿರಂತರವಾಗಿ ಸೇವೆ ಸಲ್ಲಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಆರೋಗ್ಯದ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಹಾಗೂ ಕಲ್ಯಾಣಕ್ಕೆ ನಗರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ರೇಬಿಸ್, ಹಾವು ಕಡಿತದ ಬಗ್ಗೆ ಜಾಗೃತಿ: ಜಿಲ್ಲಾ ರೋಗವಾಹಕ ಹಾಗೂ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಅವರು ಪೌರ ಕಾರ್ಮಿಕರಿಗೆ ಸೊಳ್ಳೆಗಳಿಂದ ಹರಡುವ ರೋಗಗಳು, ರೇಬಿಸ್, ರೇಬಿಸ್ ಲಸಿಕೆ ಹಾಗೂ ಹಾವು ಕಡಿತಕ್ಕೊಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಿಬಿರದಲ್ಲಿ ಎನ್‌ಸಿಡಿ ಸ್ಕ್ರೀನಿಂಗ್, ಎಚ್‌ಐವಿ, ಹೆಪಟೈಟಿಸ್, ಸಿಫಿಲಿಸ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಅಂಗಾಂಗ ದಾನ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಗಳಾದ ಡಾ. ಸ್ನೇಹಾ, ಡಾ. ಸಾಧನಾ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.