ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ರಾಜ್ಯದಲ್ಲಿ ಅನ್ಯಾಯಕ್ಕೊಳಗಾದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ₹೧೩ ಕೋಟಿ ಅನುದಾನ ಬಿಡುಗಡೆಗೊಳಿಸಿ ಸದಾಶಿವ ಆಯೋಗ ನೇಮಿಸಲಾಗಿತ್ತು. ೪ ವರ್ಷಗಳ ಕಾಲ ಸಮೀಕ್ಷೆ ಮಾಡಿ ೨೦೧೨ರಲ್ಲಿ ವರದಿ ಒಪ್ಪಿಸಿತು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನಂಬಿ ೨೦೧೩ರಲ್ಲಿ ದಲಿತರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಪ್ರಸ್ತುತ ಒಳ ಮೀಸಲಾತಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮರುದಿನವೇ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಆಶ್ವಾಸನೆ ಕೊಟ್ಟಿದ್ದ ಸಿದ್ದರಾಮಯ್ಯ, ದಲಿತರ ಕಣ್ಣಿರೊರೆಸುವ ಬದಲು ಕಣ್ಣಲ್ಲಿ ಮಣ್ಣೆರೆಚುವ ಕೆಲಸ ಮಾಡಿದ್ದಾರೆ ಎಂದು ದೂರಿದರು.ಒಳಮೀಸಲಿಗಾಗಿ ಕಾಂಗ್ರೆಸ್ ಸರ್ಕಾರ ಒನ್ ಮ್ಯಾನ್ ಕಮೀಷನ್ ಆಯೋಗ ರಚನೆ ಮಾಡಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಂತರ ಅಹೋರಾತ್ರಿ ಧರಣಿ, ಪ್ರತಿಭಟನೆ, ಸಚಿವರು, ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂವಿಧಾನಪೀಠ ನ್ಯಾ.ಸದಾಶಿವ ಆಯೋಗ ವರದಿ ಜಾರಿಗಾಗಿ ಆದೇಶ ಹೊರಡಿಸಿದ್ದರೂ ರಾಜ್ಯ ಸರ್ಕಾರವು ದತ್ತಾಂಶ ನೆಪವೊಡ್ಡಿ ಒಂದೂವರೆ ವರ್ಷವಾದರೂ ಒಳಮೀಸಲು ಜಾರಿಗೆ ತಂದಿಲ್ಲ. ಇದು ಕಾಂಗ್ರೆಸ್‌ನ ಮೋಸದಾಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ವಿರೋಧಿಯಾಗಿದ್ದಾರೆ ಎಂದು ಜರಿದರು.ಒಳಮೀಸಲಾತಿ ಜಾರಿಯಿಂದ ಲಂಬಾಣಿ, ಬೋವಿ ಸಮುದಾಯವರನ್ನು ಕೈಬಿಡುವ ತಪ್ಪು ತಿಳಿವಳಿಕೆಯನ್ನು ಕಾಂಗ್ರೆಸ್ ಬಿಂಬಿಸುತ್ತಿದೆ. ಪರಿಶಿಷ್ಟ 101 ಜಾತಿಗಳನ್ನು ಕೈಬಿಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸ್ಪಷ್ಟಪಡಿಸಿದರು.