ಗುಣಮಟ್ಟದ ಕಾಮಗಾರಿ ಕೈಗೊಳ್ಳಿ: ಎಚ್.ಆರ್. ಗವಿಯಪ್ಪ

| Published : May 11 2025, 11:57 PM IST

ಸಾರಾಂಶ

ತಾಲೂಕಿನ ಕಮಲಾಪುರದಲ್ಲಿ ₹26.17 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.

ಕಮಲಾಪುರದಲ್ಲಿ ₹26.17 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಭೂಮಿಪೂಜೆಗುತ್ತಿಗೆದಾರರಿಗೆ ಶಾಸಕ ಸೂಚನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ತಾಲೂಕಿನ ಕಮಲಾಪುರದಲ್ಲಿ ₹26.17 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.

ಕಮಲಾಪುರದ ವಾಲ್ಮೀಕಿ ವೃತ್ತದ ಬಳಿಯಿರುವ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ ಕಮಲಾಪುರ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ ಭೂಮಿಪೂಜೆ ನೆರವೇರಿಸಿದರು.

ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಘಟಕ ಆರಂಭವಾಗಲಿದೆ. ಇದರಲ್ಲಿಯೇ ಪಟ್ಟಣದಲ್ಲಿ ಫೀಡರ್ ಮೇನ್ ಕೊಳವೆ ಮಾರ್ಗ, 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟ ಜಲ ಸಂಗ್ರಹಗಾರ ನಿರ್ಮಾಣ, 6199 ಕಿಲೋ ಮೀಟರ್ ವಿತರಣಾ ಜಾಲಾ ಹಾಗೂ ಪಟ್ಟಣದಲ್ಲಿ ಸುಮಾರು 6000 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುವುದು. ಹಾಲಿ 4.54 ಎಂಎಲ್‌ಡಿ ಸಾಮರ್ಥ್ಯದ ಜಲಶುದ್ಧಿಕರಣ ಘಟಕವನ್ನು ನವೀಕರಣಗೊಳಿಸಲಾಗುವುದು. ಒಟ್ಟಾರೆಯಾಗಿ ₹26.17 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಇದೇ ವೇಳೆ ಕಮಲಾಪುರ ಪುರಸಭೆ ಕಚೇರಿಯಲ್ಲಿನ ನೂತನ 2 ಕಸದ ವಾಹನ, 1 ಜೆಸಿಬಿ ಯಂತ್ರ ಉದ್ಘಾಟಿಸಲಾಯಿತು. ಭೂಮಿಪೂಜೆ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಮುಕ್ತಿಯಾರ್ ಪಾಷಾ, ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಸೋಮಶೇಖರ್, ಮುಖಂಡರಾದ ಖಾಜಾಹುಸೇನ್, ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ಮತ್ತಿತರರಿದ್ದರು.