ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಭಾವನಾತ್ಮಕ ಸಂಗತಿಗಳಿಂದ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಕಾರ್ಯಕರ್ತರು ಸಾಮಾನ್ಯ ಜನರ ಹೃದಯಸ್ಪರ್ಶಿಯಾಗಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಲಹೆ ನೀಡಿದರು.ಗೋಣಿಕೊಪ್ಪದ ಖಾಸಗಿ ಸಭಾಂಗಣದಲ್ಲಿ ವಿರಾಜಪೇಟೆ ಬಿಜೆಪಿ ಮಂಡಲ ಆಯೋಜಿಸಿದ ಮೋದಿ ಸರ್ಕಾರದ 11 ವರ್ಷದ ಜನಪರ ಆಡಳಿತದ ವಿಚಾರ ವಿನಿಮಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯ ಪ್ರಜೆಗೂ ದೇಶ ಕಟ್ಟುವ ಮಹತ್ವದ ಜವಾಬ್ದಾರಿ ಇದೆ. ಅದನ್ನು ಸಮರ್ಪಕವಾಗಿ ನಿಭಾಯಿಸಲು, ಆ ಗುರಿಯತ್ತ ಸಾಗಲು ಒಬ್ಬ ನಾಯಕನ ಅಗತ್ಯ ಇದೆ. ಅಂತಹ ನಾಯಕ ಇಂದು ನಮಗೆ ಮೋದಿಯಾಗಿ ದೊರಕಿರುವುದು ಬಹುಜನ್ಮದ ಪುಣ್ಯ ಎಂದು ಶ್ಲಾಘಿಸಿದರು.ದೇಶ ಇಂದು ಆರ್ಥಿಕವಾಗಿ 4ನೇ ಸ್ಥಾನವನ್ನು ತಲುಪಿದೆ. ಈ ಪ್ರಗತಿ ನಮ್ಮ ಸುತ್ತಮುತ್ತಲಿನ ದೇಶಗಳಿಗೆ ಜೀರ್ಣಿಸಿಕೊಳ್ಳಲಾಗದ ವಿಚಾರವಾಗಿದ್ದರೂ, ಮೋದಿ ಸರ್ಕಾರ ಈ ದೇಶವನ್ನು ಮತ್ತಷ್ಟು ಪ್ರಗತಿಯ ಕಡೆಗೆ ಕೊಂಡೊಯ್ಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರ, ಶೈಕ್ಷಣಿಕ, ವಿಜ್ಞಾನಗಳಲ್ಲಿ ಪ್ರಗತಿಯನ್ನು ಕಂಡುಕೊಳ್ಳುತ್ತಿದೆ. ದೇಶದ ಸೈನಿಕರ ಶಕ್ತಿಯನ್ನು ಹೆಚ್ಚಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ, ಅಲ್ಪಸಂಖ್ಯಾತರ ಮೇಲ್ಮಟ್ಟದ ಜೀವನಕ್ಕೆ ಆಧಾರಿತವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಪ್ರಗತಿಪರ ಕಾರ್ಯಗಳ ಬಗ್ಗೆ ಸಾಮಾನ್ಯ ಜನರಡೆಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಈ ವಿಚಾರವಾಗಿ ಆಲಸ್ಯ ಹೊಂದಿದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುಮಾರು ಒಂದು ಕಾಲು ಗಂಟೆಗಳವರೆಗೆ ನಡೆದ ಕಾರ್ಯಾಗಾರದಲ್ಲಿ ಮೋದಿ ಸರ್ಕಾರದ ಪ್ರಗತಿ ಕಾರ್ಯಗಳು ಮತ್ತು ಕಾರ್ಯಕರ್ತರು ಈ ಸಮಾಜದೊಡನೆ ಬರೆಯಬೇಕಾದ ಸೂಕ್ಷ್ಮತೆಗಳ ಬಗ್ಗೆ ವಿವರಿಸಿದರು.ನಂತರ ಪ್ರತಿಯೊಬ್ಬರಿಗೂ ದೇಶ ಕಟ್ಟಲು ಕಟ್ಟಿಬದ್ಧರಾಗುತ್ತೇವೆ ಎಂಬ ತತ್ವಗಳ ಸಂಕಲ್ಪವನ್ನು ಬೋಧಿಸಲಾಯಿತು.
ದೇಶ ಕಟ್ಟಲು ಸದಾ ಕ್ರಿಯಾಶೀಲ:ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾರ್ಯಕರ್ತರು ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಹೊಂದಿರಬೇಕು. ಬಿಜೆಪಿ ಪಕ್ಷ ದೇಶ ಕಟ್ಟಲು ಸದಾ ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆಯ ಭಾಗವಾಗಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಒಂದು ಗಿಡ ನೆಡುವ ಮೂಲಕ ಪರಿಸರ ಸಮತಲವನ್ನು ಕಾಪಾಡಲು ಮುಂದಾಗಬೇಕು. ಆಗಸ್ಟ್ 15 ರವರೆಗೆ ಗಿಡ ನೆಡುವ ಕಾರ್ಯ ಮುಂದುವರೆಯಲಿದೆ. ಆರೋಗ್ಯ ಪೂರ್ಣ ಬದುಕಿಗಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಪ್ರಯುಕ್ತ ಬಿಜೆಪಿಯು ಪ್ರತಿ ತಾಲೂಕುಗಳಲ್ಲಿ ಸಂಘ ಸಂಸ್ಥೆಗಳ ಜೊತೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. 1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿ ಹಲವಾರು ದೇಶಭಕ್ತರನ್ನು ಜೈಲಿಗೆ ಕಳುಹಿಸಿದ ಹಿನ್ನೆಲೆಯಾಗಿ ಜೂನ್ 25ರಂದು ಕರಾಳ ದಿನಾಚರಣೆ ಆಚರಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.ಮೋದಿ ಸರ್ಕಾರದ ಅಗತ್ಯತೆ ಹೆಚ್ಚಿದೆ:
ಕಾರ್ಯಕ್ರಮದ ಸಂಚಾಲಕ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ, ಸುಭದ್ರ ದೇಶದ ನಿರ್ಮಾಣಕ್ಕೆ ಮೋದಿ ಸರ್ಕಾರದ ಅಗತ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 11 ವರ್ಷಗಳನ್ನು ಸರ್ಕಾರ ಪೂರೈಸಿ, ಜನಪರ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾಕುಶಲಪ್ಪ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕುಟ್ಟಂಡ ಅಜಿತ್ ಕರಂಬಯ್ಯ, ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಮಾಪಂಗಡ ಯಮುನಾ ಚಂಗಪ್ಪ, ಮಾಚಿಮಾಡ ಎಂ ರವೀಂದ್ರ ಸೇರಿದಂತೆ ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖರು, ಸದಸ್ಯರು ಇದ್ದರು.