ನಮ್ಮ ಸುತ್ತಲಿನ ಪರಿಸರ, ನೈರ್ಮಲ್ಯ ವ್ಯವಸ್ಥೆ ಮತ್ತು ನಮ್ಮ ಸ್ಥಳೀಯ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಕೈಜೋಡಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ.
ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಮತ್ತು ನಶಾ ಮುಕ್ತ ಭಾರತ ಅಭಿಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮುಳಗುಂದವಿದ್ಯಾರ್ಥಿಗಳು, ಶಿಕ್ಷಕರು, ನೌಕರರು, ಪಾಲಕರು- ಪೋಷಕರು ಎಲ್ಲರಿಗೂ ಸಾಮಾನ್ಯ ಜವಾಬ್ದಾರಿಗಳಿದ್ದು, ಎಲ್ಲರೂ ತಮ್ಮ ಪಾಲಿನ ಕರ್ತವ್ಯಗಳನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಅದು ದೇಶ ಸೇವೆಗೆ ಸಮಾನ ಎಂದು ಪ್ರಾಚಾರ್ಯ ಡಾ. ಆರ್.ಎಂ.ಕಲ್ಲನಗೌಡರ್ ಹೇಳಿದರು.
ಸ್ಥಳೀಯ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 68ನೇ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಮತ್ತು ನಶಾ ಮುಕ್ತ ಭಾರತ ಅಭಿಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ಸುತ್ತಲಿನ ಪರಿಸರ, ನೈರ್ಮಲ್ಯ ವ್ಯವಸ್ಥೆ ಮತ್ತು ನಮ್ಮ ಸ್ಥಳೀಯ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಕೈಜೋಡಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾರುತಿ ಮಾತನಾಡಿ, ಜೀವನ ರೂಪಿಸಿಕೊಳ್ಳಬೇಕಾದ ಹಂತಗಳಲ್ಲಿ ಯುವಕರು ಮುಖ್ಯವಾಗಿ ವಿದ್ಯಾರ್ಥಿಗಳು ನಶೆಯ ಬಲೆಗೆ ಸಿಲುಕುತ್ತಿರುವುದು ವಿಪರ್ಯಾಸ. ಯುವ ಸಮುದಾಯ ದುಶ್ಚಟಗಳನ್ನ ಬಿಟ್ಟು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದರು.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಸ್ಎಸ್ ಘಟಕಕ್ಕೆ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಳೆದ ಸಾಲಿನಲ್ಲಿ ಎನ್ಎಸ್ಎಸ್ ಘಟಕದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ವೇಳೆ ಐಕ್ಯೂಎಸಿ ಸಂಯೋಜಕ ನಾಗರಾಜ ಎ. ಸೇರಿ ಬೋಧಕ ಮತ್ತು ಭೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಶಿವಲೀಲಾ ಬಳಿಗೇರಾ ನಿರೂಪಿಸಿದರು.ಕಾರ್ಯಕ್ರಮದ ನಂತರ ಎನ್ಎಸ್ಎಸ್ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಸೇವೆ ಕೈಗೊಂಡರು.