ಕಟಪಾಡಿ ಅಯ್ಯಪ್ಪ ಮಂದಿರಕ್ಕೆ ಅರುಣ್ ಯೋಗಿರಾಜ್‌ ಮೂರ್ತಿ ಕೆತ್ತನೆ

| Published : May 10 2025, 01:18 AM IST

ಸಾರಾಂಶ

ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದಲ್ಲಿ ಈ ನೂತನ ಅಮೃತ ಶಿಲಾಮಯ ಮಂದಿರಕ್ಕೆ ಅಯ್ಯಪ್ಪಸ್ವಾಮಿಯ ವಿಗ್ರಹ ಕೆತ್ತನೆ ಜವಾಬ್ದಾರಿಯನ್ನು ಅಯೋಧ್ಯೆಯ ರಾಮಲಲ್ಲನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ವಹಿಸಿರುವುದು ವಿಶೇಷ.

ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ನೂತನ ಮಂದಿರ ನಿರ್ಮಾಣ

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದವು ೪೦ನೇ ವರ್ಷದ ಶಬರಿಮಲೆ ಯಾತ್ರೆ ಪೂರೈಸಲಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಸುರೇಶ್ ಗುರುಸ್ವಾಮಿ ಮಾರ್ಗದರ್ಶನದಲ್ಲಿ ಇಲ್ಲಿನ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದಲ್ಲಿ ಈ ನೂತನ ಅಮೃತ ಶಿಲಾಮಯ ಮಂದಿರಕ್ಕೆ ಅಯ್ಯಪ್ಪಸ್ವಾಮಿಯ ವಿಗ್ರಹ ಕೆತ್ತನೆ ಜವಾಬ್ದಾರಿಯನ್ನು ಅಯೋಧ್ಯೆಯ ರಾಮಲಲ್ಲನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ವಹಿಸಿರುವುದು ವಿಶೇಷ.

ಈ ಮಂದಿರದಲ್ಲಿ ಗಣಪತಿ, ಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿವೆ. ಇಲ್ಲೇ ಇರುವ ಪುರಾತನ ನಾಗದೇವರ ಸನ್ನಿಧಾನವೂ ಜೀರ್ಣೋದ್ಧಾರಗೊಳ್ಳಲಿದೆ.

ಇಲ್ಲಿನ ಪಾಪನಾಶಿನಿ ನದಿ ತೀರನಲ್ಲಿ ಉದ್ಯಮಿ ರಿಶಾನ್ ಟಿ. ದಾನವಾಗಿ ನೀಡಿರುವ ೩೦ ಸೆಂಟ್ಸ್ ನಿವೇಶನದಲ್ಲಿ ಸುಮಾರು ೬ ಕೋಟಿ ರು. ವೆಚ್ಚದಲ್ಲಿಈ ಮಂದಿರ ನಿರ್ಮಾಣಗೊಳ್ಳಲಿದೆ. ಕರಾವಳಿಯಲ್ಲೇ ಪ್ರಪ್ರಥಮವಾಗಿ ಮಕರಾನ್ ಅಮೃತಶಿಲೆಯಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗಳ್ಳಲಿರುವ ಮಂದಿರವು ಮುಂಬರುವ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

ದಕ್ಷಿಣದ ಶೈಲಿ, ಉತ್ತರದ ಶಿಲ್ಪಿ!:

ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನೊಳಗೊಂಡಿರುವ ಈ ಮಂದಿರಕ್ಕೆ ಉತ್ತರ ಭಾರತದ ರಾಜಸ್ಥಾನ ಸೋಮಪುರದ 3 ತಲೆಮಾರುಗಳ ಶಿಲ್ಪಿಗಳ ಕುಟುಂಬದ ವಸಂತ ಕುಮಾರ್ ಶಾಂತಿಲಾಲ್ ತಂಡ ಮಕರಾನ್ ಅಮೃತ ಶಿಲೆಯ ಕೆತ್ತನೆ ಕೆಲಸ ಆರಂಭಿಸಿದ್ದಾರೆ.

........................

ಎರಡನೇ ಅಯ್ಯಪ್ಪ ವಿಗ್ರಹ !

ಅರುಣ್ ಯೋಗಿರಾಜ್ ಅವರು ಕೃಷ್ಣ ಶಿಲೆಯಲ್ಲಿ ಅಯ್ಯಪ್ಪ ಮೂರ್ತಿ ಕೆತ್ತಲು ಈಗಾಗಲೇ ವೀಳ್ಯ ಪಡೆದುಕೊಂಡು ಕೆಲಸ ಆರಂಭಿಸಿದ್ದಾರೆ. ‘ತಾನು ಚಿಕ್ಕಂದಿನಲ್ಲಿ ಪ್ರಪ್ರಥಮವಾಗಿ ಅಯ್ಯಪ್ಪ ಸ್ವಾಮಿ ಮೂರ್ತಿ ರಚನೆ ಮಾಡಿದ್ದೆ. ಆ ಮೂತಿ ಈಗ ಎಲ್ಲಿ ಪೂಜೆಗೊಳ್ಳುತ್ತಿದೆ ಎಂದು ಗೊತ್ತಿಲ್ಲ. ಆ ಮೂರ್ತಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಅದು ಸಿಕ್ಕಿಲ್ಲ. ಇದೀಗ ಮತ್ತೆ ಅಯ್ಯಪ್ಪನ ಮೂರ್ತಿ ಕೆತ್ತಲು ಸದವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದವರು ಹೇಳಿದ್ದಾರೆ.