ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಶೆ ಪಾರ್ಟಿಗೆ ವಿದ್ಯಾರ್ಥಿಗಳನ್ನು ಕರೆದು ವಿವಾದಕ್ಕೆ ಸಿಲುಕಿದ ಮಂಗಳೂರಿನ ರೆಸ್ಟೋರೆಂಟ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ನಗರದ ದೇರೆಬೈಲು ಕೊಂಚಾಡಿಯಲ್ಲಿ ಲಿಕ್ಕರ್ ಲಾಂಜ್ ಹೆಸರಿನಲ್ಲಿ ಹೊಸತಾಗಿ ಆರಂಭಗೊಂಡ ರೆಸ್ಟೋರೆಂಟ್ ವಿದ್ಯಾರ್ಥಿಗಳಿಗೆ ಆಫರ್ ನೀಡಿ ಕೇಸು ಎದುರಿಸುವಂತಾಗಿದೆ.
‘ಸ್ಪೂಡೆಂಟ್ಸ್ ನೈಟ್ ಬಿಗ್ ಆಫರ್’ ಹೆಸರಲ್ಲಿ ಲಿಕ್ಕರ್ ಲಾಂಜ್‌ನಲ್ಲಿ ಆಯೋಜನೆ ಆಗಿದ್ದ ಪಾರ್ಟಿಗೆ ಸದ್ಯಕ್ಕೆ ಕಾವೂರು ಪೊಲೀಸರು ತಡೆ ಹಾಕಿದ್ದು, ಬಾರ್ ಮಾಲೀಕನಿಗೆ ನೋಟೀಸ್ ನೀಡಿದ್ದಾರೆ. ಬಳಿಕ ಎಚ್ಚೆತ್ತ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.ಪಾರ್ಟಿ ಆಯೋಜಕರು ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಪಾನದ ವ್ಯವಸ್ಥೆ ಇದೆಯೆಂದು ಆಫರ್ ನೀಡಿದ್ದರು. ಲಿಕ್ಕರ್ ಲಾಂಜ್ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕದ ಕಾನೂನು ಪ್ರಕಾರ 18 ವರ್ಷ ತುಂಬಿದವರಿಗೆ ಬಾರ್‌ನಲ್ಲಿ ಕುಡಿಯುವುದು ನಿಷಿದ್ಧವಲ್ಲ. ಕೇರಳದಲ್ಲಿ ಮದ್ಯ ಮಾರಾಟ ಮತ್ತು ಸೇವನೆಗೆ 22 ವಯಸ್ಸಾಗಿರಬೇಕು ಎಂಬ ಕಾನೂನು ಇದ್ದರೂ, ಕರ್ನಾಟಕದಲ್ಲಿ ಇಂಥ ಕಟ್ಟುನಿಟ್ಟು ಮಾಡಿಲ್ಲ. ಆದರೆ ಲಿಕ್ಕರ್ ಲಾಂಜ್‌ನಲ್ಲಿ ನೇರವಾಗಿ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಮೂಲಕ ವಿದ್ಯಾರ್ಥಿಗಳೇ ಬಂದು ನಶೆ ಏರಿಸಿಕೊಳ್ಳಿ ಎಂದು ಬಾರ್ ಮಾಲೀಕನೇ ಯಾವುದೇ ಕಾನೂನು ಕಟ್ಟಳೆಗಳ ಭಯ ಇಲ್ಲದೆ ಆಫರ್ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ. ಮಂಗಳೂರಿನ ಕೆಲವು ಪಬ್‌ಗಳಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಡಿಸ್ಕೌಂಟ್ ರೇಟ್ ಇದೆ. ಇದರ ನೆಪದಲ್ಲಿ ಈ ಬಾರ್‌ನಲ್ಲೂ ನೇರವಾಗಿ ವಿದ್ಯಾರ್ಥಿಗಳನ್ನು ಕುಡಿತಕ್ಕೆ ಆಹ್ವಾನಿಸಿದ್ದರು.ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬಾರ್ ಮತ್ತು ಪಬ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಆಫರ್ ನೀಡಿ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ನಿಗಾ ವಹಿಸಲು ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇರೆಬೈಲ್ ಬಾರ್‌ನ ಪ್ರಕರಣದಲ್ಲಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ.