ಶಾಸಕರ ವಿರುದ್ಧ ಕೇಸ್‌: ಸಿಎಂ ಕಾರು ಮುತ್ತಿಗೆಗೆ ಯತ್ನ

| Published : Feb 18 2024, 01:30 AM IST / Updated: Feb 18 2024, 12:49 PM IST

BJP Protest
ಶಾಸಕರ ವಿರುದ್ಧ ಕೇಸ್‌: ಸಿಎಂ ಕಾರು ಮುತ್ತಿಗೆಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರ ವಿರುದ್ಧ ಎಫ್ ಐಆ‌ರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ. ಅದಕ್ಕೂ ಪೊಲೀಸರು ಬಿಡದೇ ಇದ್ದಾಗ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿದರು.

ಕನ್ನಡಪ್ರಭ ವಾರ್ತೆ ಮಂಗಳೂರು 

ಮಂಗಳೂರಿನ ಖಾಸಗಿ ಶಾಲೆಯಲ್ಲಿ ಹಿಂದು ನಿಂದನೆ ಘಟನೆಗೆ ಸಂಬಂಧಿಸಿ ಶಾಸಕರ ವಿರುದ್ಧ ಕೇಸು ದಾಖಲಿರುವ ಕ್ರಮ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ವಿಮಾನ ನಿಲ್ದಾಣದಿಂದ ಅಡ್ಯಾರಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಬೊಂದೇಲ್‌ನಲ್ಲಿ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ ವಿದ್ಯಮಾನ ನಡೆದಿದೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ಸಮಾವೇಶ ನಡೆಯುವ ಸಹ್ಯಾದ್ರಿ ಮೈದಾನಕ್ಕೆ ತೆರಳುವ ವೇಳೆ ಕಾರಿಗೆ ಮುತ್ತಿಗೆ ಹಾಕಲು ಬೊಂದೆಲ್ ಬಳಿ ಕಾರ್ಯಕರ್ತರು ಸೇರಿದ್ದರು.

ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ರಸ್ತೆಯಲ್ಲಿ ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಹಾಗೂ ಘೋಷಣಾ ಫಲಕ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಪೊಲೀಸರು ಆಗಮಿಸಿದ್ದು, ಕಾರ್ಯಕರ್ತರನ್ನು ಜಾಗ ಖಾಲಿ ಮಾಡುವಂತೆ ಸೂಚಿಸಿದ್ದಾರೆ. 

ಬಳಿಕ ವಿಮಾನ ನಿಲ್ದಾಣದಲ್ಲಿದ್ದ ಕಮಿಷನ‌ರ್ ಅನುಪಮ್ ಅಗರ್‌ವಾಲ್‌ ಕೂಡ ಸ್ಥಳಕ್ಕೆ ಆಗಮಿಸಿದ್ದು ಕೂಡಲೇ ಜಾಗ ಖಾಲಿ ಮಾಡಲು ಹೇಳಿದ್ದಾರೆ.

ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕಮಿಷನ‌ರ್ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕರ ವಿರುದ್ಧ ಎಫ್ ಐಆ‌ರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ. ಅದಕ್ಕೂ ಪೊಲೀಸರು ಬಿಡದೇ ಇದ್ದಾಗ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿದರು. ಅಷ್ಟರಲ್ಲಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಎಲ್ಲರನ್ನೂ ಪೊಲೀಸ್‌ ಬಸ್‌ಗೆ ತುಂಬಿಸಿ ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ.