ಸಾರಾಂಶ
ದಾಂಡೇಲಿ: ಪತ್ರಕರ್ತರೆಂದು ನಗರದ ಹೋಟೆಲ್‌ಗೆ ನುಗ್ಗಿ ಬೆದರಿಕೆ ಹಾಕಿದ ಹುಬ್ಬಳ್ಳಿ ಮೂಲದ ಮೂವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ಹುಬ್ಬಳ್ಳಿಯ ಭೈರಿದೇವರಕೊಪ್ಪದ ಲಕ್ಷ್ಮಣ್ ಪ್ರೇಮ ರೋಕಾ, ಮಂಜುನಾಥ್ ಚಂದ್ರಶೇಖರ್ ಚೌಹಾಣ್, ಹಳೆಹುಬ್ಬಳ್ಳಿಯ ಸಂತೋಷ್ ಮಡಿವಾಳಪ್ಪ ಕಮಲಾಕರ ಎಂದು ಗುರುತಿಸಲಾಗಿದೆ.ಇವರು, ಇಲ್ಲಿನ ಶೆಟ್ಟಿ ಲಂಚ್ ಹೋಮ್ ಗೆ ಬಂದು "ನಾವು ಹುಬ್ಬಳ್ಳಿಯಿಂದ ಬಂದಿದ್ದೇವೆ. ನಮ್ಮದು ರಾಜ್ಯಮಟ್ಟದ ವಾರಪತ್ರಿಕೆ. ನಾವು ಅದರ ವರದಿಗಾರರು. ನಿಮ್ಮ ಹೊಟೇಲಿನ ಕಿಚನ್ ನೋಡಬೇಕು " ಎಂದಿದ್ದಾರೆ. ಆಗ ಹೋಟೆಲ್ ಸಿಬ್ಬಂದಿ, ಮಾಲೀಕರು ಹೊರಗಡೆ ಹೋಗಿದ್ದಾರೆ ಎಂದಾಗ, ಒಂದಿಷ್ಟು ಕಾಲ ಕಾದು, ಎಷ್ಟು ಹೊತ್ತು ನಿಮ್ಮ ಮಾಲೀಕರಿಗೆ ಕಾಯಬೇಕು? ಪತ್ರಕರ್ತರನ್ನು ಕಾಯಿಸಬಾರದೆಂದು ಗೊತ್ತಾಗುವುದಿಲ್ಲವೇ? ಎಂದು ಆವಾಜ್ ಹಾಕಿದ್ದಾರೆ. ಆಗ ಬಂದ ಹೋಟೆಲ್ ಮಾಲೀಕರು, ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಾಗ, ಏರುಧ್ವನಿಯಲ್ಲಿ ನಾವು ಮೀಡಿಯಾದವರು. ನಮ್ಮ ಐಡಿ ಕಾರ್ಡ್ ಕೇಳ್ತಿಯಾ? ಎಂದು ಅಕ್ರಮವಾಗಿ ಒಳ ನುಗ್ಗಲು ಯತ್ನಿಸಿದ್ದಾರೆ.
ಆಗ ಸ್ಥಳೀಯ ಪತ್ರಕರ್ತರಾದ ಬಿ.ಎನ್. ವಾಸರೆ, ಗುರುಶಾಂತ ಜಡೆಹಿರೇಮಠ, ಯು.ಎಸ್. ಪಾಟೀಲ್, ಪ್ರವೀಣ್ ಸುಲಾಕೆ, ರಾಜೇಶ್ ತಳೇಕರ್ ಮುಂತಾದವರು ಆಗಮಿಸಿ ನಕಲಿ ಪತ್ರಕರ್ತರಿಗೆ ಛೀಮಾರಿ ಹಾಕಿದ್ದಾರೆ. ಅಲ್ಲದೇ ದಾಂಡೇಲಿಗೆ ಬಂದು ಬ್ಲಾಕ್‌ಮೇಲ್ ಮಾಡಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಆಗ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಕಾಲು ಹಿಡಿದು ಗೋಗರೆದರು: ದಾಂಡೇಲಿ ನಗರ ಠಾಣೆಯ ಪಿಎಸ್‌ಐ ಐ.ಆರ್. ಗಡ್ಡೇಕರ್ ಅವರು ಸ್ಥಳಕ್ಕೆ ಆಗಮಿಸಿ, ಈ ಮೂವರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಸಮಂಜಸವಾದ ಉತ್ತರ ಮತ್ತು ದಾಖಲೆಗಳು ದೊರೆಯದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ ಸಂದರ್ಭದಲ್ಲಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಇಂಥ ಕೆಲಸ ಮಾಡುವುದಿಲ್ಲ, ನಮ್ಮನ್ನು ಬಿಟ್ಟುಬಿಡಿ ಎಂದು ಪೊಲೀಸರ ಕೈ, ಕಾಲಿಗೆ ಬಿದ್ದು ಗೋಗರೆದ ಘಟನೆಯೂ ನಡೆಯಿತು.ಶೆಟ್ಟಿ ಲಂಚ್ ಹೋಮ್‌ನ ಮಾಲೀಕ ಬಾಲಕೃಷ್ಣ ಗೌಡ ದೂರು ನೀಡಿದ್ದು, ಪಿಎಸ್‌ಐ ಐ.ಆರ್. ಗಡ್ಡೇಕರ್ ತನಿಖೆ ನಡೆಸುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))