ಸರ್ಕಾರದ ಎಸ್ಮಾ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು

| Published : Jul 30 2025, 12:46 AM IST

ಸರ್ಕಾರದ ಎಸ್ಮಾ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿದಾಗ ಎಸ್ಮಾ ಜಾರಿ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ಬಾರಿ ಎಸ್ಮಾ ವಿರುದ್ಧ ಧಾರವಾಡ ಹೈಕೋರ್ಟ್‌ನಲ್ಲಿ ಜು. 28ರಂದು ಪ್ರಕರಣ ದಾಖಲಿಸಲಾಗಿದೆ.

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆ. 5 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಬಂದ್‌ಗೆ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ಬಾಹ್ಯ ಬೆಂಬಲ ನೀಡಿದ್ದು, ಸರ್ಕಾರ ಜಾರಿ ಮಾಡಿರುವ ಎಸ್ಮಾ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಎಚ್.ಎಲ್. ವಿಶ್ವನಾಥ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿದಾಗ ಎಸ್ಮಾ ಜಾರಿ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ಬಾರಿ ಎಸ್ಮಾ ವಿರುದ್ಧ ಧಾರವಾಡ ಹೈಕೋರ್ಟ್‌ನಲ್ಲಿ ಜು. 28ರಂದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ 38 ತಿಂಗಳ ಹಿಂಬಾಕಿ ಹಣ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಸಿ ಆ. 5 ರಿಂದ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದೆ. ಕಾರ್ಮಿಕರ ಹಿತ ಕಾಯುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶ. ಸುಮಾರು 38 ತಿಂಗಳ ಹಿಂಬಾಕಿ ಪಾವತಿಸುವಲ್ಲಿ ಎಲ್ಲ ಸರ್ಕಾರಗಳು ಮೀನಾಮೇಷ ಎಣಿಸುವ ಕಾರ್ಯ ಮಾಡುತ್ತಿವೆ. ಅಲ್ಲದೇ ವೇತನ ಪರಿಷ್ಕರಿಸದೇ ಕಡಿಮೆ ವೇತನದಲ್ಲಿ ನೌಕರರನ್ನು ದುಡಿಸಿಕೊಳ್ಳುತ್ತಿರುವ ನಿಗಮ- ಮಂಡಳಿಯಿಂದ ನೌಕರರ ಕಲ್ಯಾಣ ಹೇಗೆ ಸಾಧ್ಯ. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದರು.

ನಿವೃತ್ತಿದಾರ ವೇತನ ಪರಿಷ್ಕರಣೆ, ನೌಕರರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾನತ್ತು, ವಜಾ ಹಾಗೂ ಬಡ್ತಿ ತಡೆಹಿಡಿಯುವ ಪ್ರಕ್ರಿಯೆ ಕೂಡಲೇ ಕೈಬಿಡಬೇಕು. 38 ತಿಂಗಳ ವೇತನ ಹಿಂಬಾಕಿ, 2012ರ ಮುಷ್ಕರದಲ್ಲಿ ವಜಾಗೊಂಡ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಮರು ನೇಮಕ ಮಾಡಿಕೊಳ್ಳಬೇಕು. ಫಾರಂ-4ನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ 8 ಗಂಟೆಗಳ ಸಮಯ ನಿಗದಿ ಮಾಡಬೇಕು. ಚಾಲಕ, ನಿರ್ವಾಹಕರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಹಾಗೂ ವಿವಿಧ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಾಬುರಾವ ಮಾನಪಾಟಿ, ಸಂಜು ದೊಡ್ಡಗೌಡರ, ಗಂಗಾಧರ ಗಾಣಿಗೇರ, ಸುರೇಶ ಗಾಣಿಗೇರ ಸೇರಿದಂತೆ ಇನ್ನಿತರರಿದ್ದರು.