ಕೆಮಿಕಲ್‌ ಬಣ್ಣ ಬಳಸಿದರೆ ಕೇಸ್‌

| Published : Aug 24 2025, 02:00 AM IST

ಸಾರಾಂಶ

ಹಬ್ಬಕ್ಕೆ ಸಂಬಂಧಿಸಿದಂತೆ ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್‌ ಪ್ಯಾರೀಸ್ (ಪಿಒಪಿ) ಬಳಕೆಯನ್ನು ನಿರ್ಬಂಧಿಸಲಾಗಿದೆ. ಇಂಥ ಮೂರ್ತಿಗಳು ಕಂಡು ಬಂದರೆ ವಶಪಡಿಸಿಕೊಂಡು, ತಯಾರಿಸಿದವರ, ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ದಂಡ ವಿಧಿಸಲಾಗುವುದು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ತಯಾರಿಸುವ ಗಣೇಶ ಮೂರ್ತಿಗಳಲ್ಲಿ ಪರಿಸರಕ್ಕೆ ಮಾರಕವಾದ ಪಿಓಪಿ ಹಾಗೂ ರಾಸಾಯನಿಕಯುಕ್ತ ಬಣ್ಣ ಬಳಕೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೌರಾಯುಕ್ತ ಕೆ.ಜಿ. ರಮೇಶ್‌ ಎಚ್ಚರಿಕೆ ನೀಡಿದರು.ನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕಾ ಸ್ಥಳಗಳಿಗೆ ಎಇಇ ಶಿವಶಂಕರ್‌ ಜತೆ ಭೇಟಿ ನೀಡಿದ ಪೌರಾಯುಕ್ತರು, ಅಲ್ಲಿ ಸಿದ್ದಪಡಿಸಿಟ್ಟಿದ್ದ ಗಣೇಶನ ಪ್ರತಿಮೆಗಳು ಮತ್ತು ಮಿಶ್ರಣದ ಬಣ್ಣಗಳನ್ನು ಪರಿಶೀಲಿಸಿ ಮಾತನಾಡಿರು.ಪಿಒಪಿ ಬಳಸಬೇಡಿ: ಹಬ್ಬಕ್ಕೆ ಸಂಬಂಧಿಸಿದಂತೆ ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್‌ ಪ್ಯಾರೀಸ್ (ಪಿಒಪಿ) ಬಳಕೆಯನ್ನು ನಿರ್ಬಂಧಿಸಲಾಗಿದೆ. ಇಂಥ ಮೂರ್ತಿಗಳು ಕಂಡು ಬಂದರೆ ವಶಪಡಿಸಿಕೊಂಡು, ತಯಾರಿಸಿದವರ, ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ದಂಡ ವಿಧಿಸಲಾಗುವುದು ಎಂದು ತಿಳಿಸಿದರು.ಪಿಒಪಿ ಮತ್ತು ರಾಸಾಯನಿಕ ಮೂರ್ತಿಗಳನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ, ಜನಜಾಗೃತಿ ಮೂಡಿಸಲು ಪರಿಸರಸ್ನೇಹಿ ಬಣ್ಣರಹಿತ ಗಣೇಶ ಮತ್ತು ಗೌರಿ ಮೂರ್ತಿಗಳ ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದರು.ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ

ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಮಣ್ಣಿನ ಗಣೇಶನ ಪೂಜೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪಿಒಪಿಯಿಂದ ತಯಾರಿಸಿದ್ದ ದೊಡ್ಡ ಗಣೇಶ ಮೂರ್ತಿಗಳನ್ನು ಪೂಜಿಸಿ ಕೆರೆಗಳಲ್ಲಿ ವಿಸರ್ಜನೆ ಮಾಡಿದಾಗ ನೀರಿನಲ್ಲಿ ಮೂರ್ತಿಗಳು ಕರಗುವುದಿಲ್ಲ. ನೀರಿನ ಮೇಲೆ ತೇಲುತ್ತಿರುತ್ತದೆ. ಹೀಗಾಗಿ ಎಲ್ಲರೂ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜಿಸಿ ನಂತರ ಸಾರ್ವಜನಿಕರು ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಅದರ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸುವಂತೆ ಅರಿವು ಮೂಡಿಸಿದರು.