ಸಾರಾಂಶ
ಅನ್ಯಾಯದ ವಿರುದ್ಧ ಹೋರಾಡಿದ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಎಷ್ಟು ಬೇಕಾದರೂ ಕೇಸ್ ಹಾಕಲಿ ನಾವು ನೋಡುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಖುಷಿ ಪಡಿಸಲು ನಮ್ಮ ಮೇಲೆ ಕೇಸ್ ಮಾಡಿದ್ದಾರೆ. ನಾವು ಇಂತಹ ಕೇಸ್‌ಗೆ ಹೆದರಲ್ಲ, ಎಷ್ಟು ಕೇಸ್ ಹಾಕುತ್ತಾರೋ ಹಾಕಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸವಾಲೆಸೆದಿದ್ದಾರೆ. ಅಲ್ಲದೇ, ನಾವು ಮುಖ್ಯಮಂತ್ರಿ, ಮಂತ್ರಿಗಳ ಮೇಲೆ ಚೀಟಿಂಗ್ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಮೇಲೆ ಒಂದೇ ಒಂದು ಕೇಸ್ ಇಲ್ಲ. ಆದರೂ 31 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಿದರು. ಅನ್ಯಾಯದ ವಿರುದ್ಧ ಹೋರಾಡಿದ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಎಷ್ಟು ಬೇಕಾದರೂ ಕೇಸ್ ಹಾಕಲಿ ನಾವು ನೋಡುತ್ತೇವೆ ಎಂದರು.
ನಮ್ಮ ಪ್ರತಿಭಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ. ನಾವು ಹಿಂದೂ ಮುಸ್ಲಿಂ ಜಗಳ ಹಚ್ಚಿಲ್ಲ. ಅವತ್ತು ಅಂಗಡಿ ನಾವು ಬಂದ್ ಮಾಡಿಸಿಲ್ಲ. ಸರ್ಕಾರವೇ ಪೊಲೀಸರ ಮೂಲಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿತ್ತು ಎಂದು ಸ್ಪಷ್ಟಪಡಿಸಿದರು.ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್‌ಗಳಿವೆ ಅಂತೆಲ್ಲ ಸುಳ್ಳು ಹೇಳಿದ್ದಾರೆ. ಈ ಮೂಲಕ ಜನರ ಹಾದಿ ತಪ್ಪಿಸಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಚೀಟಿಂಗ್ ಕೇಸ್ ಮಾಡುತ್ತೇವೆ. ನಿಮ್ಮ ಹಿಟ್ಲರ್ ರೂಲ್ ಬಿಡಿ. ಎಷ್ಟು ಕೇಸ್ ಹಾಕುತ್ತೀರೋ ಹಾಕಿ ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.