ಸಿವಿಲ್ ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ಆದರೂ, ಪ್ರಕರಣ ದಾಖಲಿಸಿ ಇಬ್ಬರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುವ ಜತೆಗೆ ಗ್ರಾಮದ ದಲಿತರನ್ನು ಟಾರ್ಗೇಟ್ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಿವಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಎಂಟು ದಲಿತರ ಮೇಲೆ ಮೇಲುಕೋಟೆ ಪೊಲೀಸ್ ಠಾಣೆ ಪಿಎಸ್‌ಐ ಆನಂದಗೌಡ ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.ತಾಲೂಕಿನ ಕದಲಗೆರೆ ಗ್ರಾಮಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಮಾತನಾಡಿದ ಅವರು, ಕದಲಗೆರೆ ಗ್ರಾಮ ಠಾಣಾಕ್ಕೆ ಸೇರಿದ ಜಾಗದಲ್ಲಿ ದಲಿತ ಯುವಕರು ಅಂಬೇಡ್ಕರ್ ಭಾವಚಿತ್ರದ ನಾಮಫಲಕ ಅಳವಡಿಸಿದ್ದಾರೆ. ಈ ಜಾಗದಲ್ಲಿ ಬಹಳ ಹಿಂದಿನಿಂದಿಲೂ ದಲಿತರು ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಗ್ರಾಮದ ಯೋಗಾಚಾರಿ ಎಂಬ ವ್ಯಕ್ತಿ ಗ್ರಾಮ ಠಾಣಾಕ್ಕೆ ಸೇರಿದ ಜಾಗಕ್ಕೆ ಹಣ ಬಲದ ಮೂಲಕ ನಕಲಿ ಹಕ್ಕುಪತ್ರ ಮಾಡಿಸಿಕೊಂಡು ನಿವೇಶನ ತಮಗೆ ಸೇರಿದ್ದು ಎಂದು ದಲಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 1992 ರಲ್ಲಿ ಗ್ರಾಪಂನಿಂದ ನಿವೇಶನ ಮಂಜೂರಾಗಿದೆ ಎನ್ನುವ ನಕಲಿ ಹಕ್ಕು ಪತ್ರದ ಆಧಾರದ ಮೇಲೆ ಯೋಗಾಚಾರಿ ನಿವೇಶನ ತಮ್ಮದು ಎನ್ನುತ್ತಿದ್ದಾರೆ ಎಂದರು.
ಗ್ರಾಮಸ್ಥರು ನಿವೇಶನ ಗ್ರಾಮ ಠಾಣಾಕ್ಕೆ ಸೇರಿದ್ದಾಗಿದ್ದು, ಬಹಳಷ್ಟು ವರ್ಷಗಳ ಹಿಂದಿನಿಂದಲೂ ದಲಿತರು ನಿವೇಶನವನ್ನು ತಮ್ಮ ಸಮುದಾಯದ ಕೆಲಸ ಕಾರ್ಯಗಳಿಗೆ ಬಳಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ಬಗ್ಗೆ ತಿಳಿಯದೇ ದುರುದ್ದೇಶದಿಂದ ದಲಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಿವಿಲ್ ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ಆದರೂ, ಪ್ರಕರಣ ದಾಖಲಿಸಿ ಇಬ್ಬರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುವ ಜತೆಗೆ ಗ್ರಾಮದ ದಲಿತರನ್ನು ಟಾರ್ಗೇಟ್ ಮಾಡಿದ್ದಾರೆ. ಈ ಬಗ್ಗೆ ಗೃಹ ಇಲಾಖೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.
ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ನಲ್ಲಹಳ್ಳಿ ಸುರೇಶ್, ಛಲವಾದಿ ಮಹಾಸಭಾದ ಜಿಲ್ಲಾ ಮುಖಂಡ ಆನುವಾಳು ಸುರೇಶ್, ಗ್ರಾಮಸ್ಥರಾದ ನರಸಿಂಹಯ್ಯ, ಚಲುವಯ್ಯ, ಪುನೀತ್, ನಾಗಣ್ಣ, ಶಿವಮ್ಮ ಇತರರು ಇದ್ದರು.