ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಮುಂದಾಗುವುದರಿಂದ ಪ್ರಕರಣಗಳಿಗೆ ಶೀಘ್ರ ಮುಕ್ತಿ ದೊರೆಯುತ್ತದೆ. ಹಣ, ಸಮಯ ಉಳಿಯುವ ಜೊತೆಗೆ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ಅದಾಲತ್‌ನಲ್ಲಿ ನೀಡುವ ತೀರ್ಪು ನ್ಯಾಯಾಲಯದಲ್ಲಿ ಸಹಜವಾಗಿ ನಡೆಯುವ ಪ್ರಕರಣಗಳ ತೀರ್ಪುಗಳಿಗಿಂತ ಭಿನ್ನವಾಗಿದ್ದು, ಉಭಯ ಕಕ್ಷಿದಾರರಿಗೂ ಸಮಾಧಾನ ಮತ್ತು ನೆಮ್ಮದಿ ಸಿಗುವ ಜೊತೆಗೆ ಸಮಯ ಉಳಿತಾಯವಾಗುತ್ತದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದವು ಕುಟುಂಬದಲ್ಲಿದ್ದ ಅಜ್ಜ, ಅಜ್ಜಿ ಹಾಗೂ ಇನ್ನಿತರ ಹಿರಿಯ ಸದಸ್ಯರಿಂದ ಮಕ್ಕಳು ಅಥವಾ ಮೊಮ್ಮಕ್ಕಳು ತಪ್ಪು ಮಾಡಿದಾಗ ಮೂಲದಲ್ಲೇ ತಿದ್ದಿ ಸರಿ ಮಾಡುವ ಕೆಲಸ ಆಗುತ್ತಿತ್ತು.
ಇಂದಿನ ದಿನಮಾನದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿ ಇರುವುದರಿಂದ ಸಣ್ಣ ಸಣ್ಣ ಜಗಳಕ್ಕೂ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿರುವುದು ಕಳವಳಕಾರಿ ವಿಚಾರ. ಪ್ರತಿ ಸಣ್ಣಪುಟ್ಟ ವಿಚಾರಗಳನ್ನೂ ವ್ಯಾಜ್ಯಗಳನ್ನಾಗಿ ಪರಿವರ್ತಿಸಿಕೊಳ್ಳಬಾರದು. ಸಂಯಮದಿಂದ ಪರಿಸ್ಥಿತಿಗಳನ್ನು ನಿಭಾಯಿಸಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಮೂಲದಲ್ಲೇ ಕಡಿವಾಣ ಹಾಕಬೇಕು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಅಣ್ಣ ತಮ್ಮಂದಿರು ತಮ್ಮ ಜಮೀನು, ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿಕೊಂಡರೆ ಸಮಸ್ಯೆಗಳು ಪ್ರಕರಣಗಳಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಅಣ್ಣತಮ್ಮಂದಿರ ಆಸ್ತಿ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ ಸಂಬಂಧಗಳು ಹದಗೆಡುತ್ತವೆ. ನೆಮ್ಮದಿ ಹಾಳಾಗಿ ದ್ವೇಷ ಅಸೂಯೆಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಕುಟುಂಬಗಳ ಹಂತದಲ್ಲೇ ತಂದೆ ಸಂಪಾದನೆಯ ಆಸ್ತಿಪಾಸ್ತಿಗಳನ್ನು ನ್ಯಾಯಯುತ ರೀತಿಯಲ್ಲಿ ಮುಕ್ತವಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಣ್ಣಪುಟ್ಟ ವಿಸ್ತೀರ್ಣದ ಜಮೀನುಗಳಿಗಾಗಿ ಪ್ರತಿಷ್ಠೆಗಳಿಗೆ ಬಿದ್ದು ಅನೇಕರು ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ತಲೆಮಾರುಗಟ್ಟಲೇ ಮತ್ತು ಅನೇಕ ವರ್ಷಾನುಗಟ್ಟಲೆ ಓಡಾಡುತ್ತಿರುವವರು ಅನೇಕರಿದ್ದಾರೆ ಅಂತವರು ಅರ್ಥ ಮಾಡಿಕೊಂಡು ಸಂಬಂಧಗಳಿಗೆ ಬೆಲೆ ಕೊಟ್ಟರೆ ಎಲ್ಲ ಪ್ರಕರಣಗಳು ಇತ್ಯರ್ಥ ಆಗುತ್ತವೆ ಎಂದು ತಿಳಿಸಿದರು.
ಲೋಕಅದಾಲತ್‌ಲ್ಲಿ 7650 ರ ಪ್ರಕರಣಗಳು ರಾಜಿ:
ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು ಬಾಕಿ ಇರುವ 53384 ಪ್ರಕರಣಗಳ ಪೈಕಿ ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ನ್ಯಾಯಾಧೀಶರ ಸತತ ಪ್ರಯತ್ನದಿಂದಾಗಿ ಒಟ್ಟು 11,396 ಪ್ರಕರಣಗಳನ್ನು ಗುರುತಿಸಿದ್ದು, ಅದರಲ್ಲಿ 7650 ಪ್ರಕರಣಗಳು ರಾಜಿಯಾಗಿರುತ್ತದೆ. ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 1,17,205 ಗಳನ್ನು ಗುರುತಿಸಿದ್ದು, ಅದರಲ್ಲಿ 1,04,660 ಪ್ರಕರಣಗಳು ರಾಜಿಯಾಗಿದ್ದು, ಒಟ್ಟು ಮೊತ್ತ ರು. 22,27,70598 ರು.ಗಳಷ್ಟು ರಾಜಿ ಸಂಧಾನದ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥ ಪಡಿಸಲಾಯಿತು. ಆಸ್ತಿ ವಿವಾದದ ಸಿವಿಲ್ ಪ್ರಕರಣಗಳು, ಅಣ್ಣ ತಮ್ಮಂದಿರ ಮಧ್ಯೆ ಇರುವ ಪಾಲು ವಿಭಾಗ ಕೋರಿ ಸಲ್ಲಿಸಿದ ಪ್ರಕರಣಗಳು ಬ್ಯಾಂಕ್ ಸಾಲದ ವಸೂಲಾತಿ ಪ್ರಕರಣಗಳು, ರಸ್ತೆ ನಿಯಮ ಉಲ್ಲಂಘನೆ ದಂಡ ವಸೂಲಾತಿ ಪ್ರಕರಣಗಳು, ಮರಳು ಕಳ್ಳತನ ಪ್ರಕರಣಗಳು ರಾಜಿ ಆಗುವಂತಹ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು ಹೀಗೆ ಹಲವಾರು ಬಗೆಯ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಪಡಿಸಲಾಯಿತು.ವೈವಾಹಿಕ ವಿಚ್ಛೇಧನ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 14 ಪ್ರಕರಣಗಳಲ್ಲಿ ರಾಜಿ ಮಾಡಿ ಪತಿ-ಪತ್ನಿಯರನ್ನು ಒಂದದುಗೂಡಿಸಲಾಯಿತು. 63 ಹಿರಿಯ ನಾಗರೀಕರ ಪ್ರಕರಣಗಳು ಹಾಗೂ 39 ಬಾಕಿ ಇರುವ ಹಳೆಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಗೌರವಾನ್ವಿತ ನ್ಯಾಯಾಧೀಶರು ಸೇರಿದಂತೆ ವಕೀಲರು, ಕಕ್ಷಿದಾರರು ಇದ್ದರು.ಸಿಕೆಬಿ-1 ನಗರದ ಜಿಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ನ್ಯಾ.ಟಿ.ಪಿ.ರಾಮಲಿಂಗೇಗೌಡ ಚಾಲನೆ ನೀಡಿದರು.