ರಾಜ್ಯ ಸರಕಾರ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ನಗದು ರಹಿತ ಚಿಕಿತ್ಸೆಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಜಾರಿಗೆ ತಂದಿದ್ದು, ಇದರಿಂದ ನೌಕರರ ಚಿಕಿತ್ಸೆ ಸುಲಲಿತವಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಮಂಗಳೂರು: ರಾಜ್ಯ ಸರಕಾರ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ನಗದು ರಹಿತ ಚಿಕಿತ್ಸೆಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಜಾರಿಗೆ ತಂದಿದ್ದು, ಇದರಿಂದ ನೌಕರರ ಚಿಕಿತ್ಸೆ ಸುಲಲಿತವಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೆಎಎಸ್ಎಸ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಲ್ಲೆಯ ಎಲ್ಲ ತಾಲೂಕು ಮತ್ತು ಮಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಕೆಎಎಸ್ಎಸ್ ಯೋಜನೆಯಡಿ ನಗದು ರಹಿತವಾಗಿ ಚಿಕಿತ್ಸೆ ದೊರಕಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಉಪನಿರ್ದೇಶಕ ಡಾ.ಮಹೇಶ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 14 ಆಸ್ಪತ್ರೆಗಳು ಈ ಯೋಜನೆಯಡಿ ಸೇರ್ಪಡೆಯಾಗಿದೆ. ಇನ್ನಷ್ಟು ಆಸ್ಪತ್ರೆಗಳನ್ನು ಯೋಜನೆಯಡಿ ತರಲು ಪ್ರಯತ್ನಗಳಾಗುತ್ತಿವೆ. ಕೆಎಎಸ್ಎಸ್ ಯೋಜನೆಯಲ್ಲಿ ಆಸ್ಪತ್ರೆಗಳಿಗೆ ಉತ್ತಮ ಪ್ಯಾಕೇಜ್ ದರವನ್ನು ನಿಗದಿಗೊಳಿಸಲಾಗಿದೆ. ಯೋಜನೆಯಡಿ ಆಸ್ಪತ್ರೆಗಳಿಗೆ ಶೇ.15ರಷ್ಟು ಪ್ರೋತ್ಸಾಹಧನಕ್ಕೂ ಅವಕಾಶವಿದೆ ಎಂದರು.ರಾಜ್ಯ ಸರ್ಕಾರಿ ನೌಕರರು ಯಾವುದೇ ರೆಫರೆನ್ಸ್ ಇಲ್ಲದೆ ನಿಗದಿತ ಆಸ್ಪತ್ರೆಗಳಿಗೆ ನೇರವಾಗಿ ದಾಖಲಾಗಬಹುದು. ಈ ಸಂದರ್ಭದಲ್ಲಿ ಕೆ.ಜಿ.ಐ.ಡಿ. ಸಂಖ್ಯೆ ಆಸ್ಪತ್ರೆಗಳಿಗೆ ನೀಡಬೇಕಿದೆ. ಸರ್ಕಾರಿ ನೌಕರರ ಗ್ರೂಪ್ ಅನುಸಾರ ಚಿಕಿತ್ಸಾ ಪ್ಯಾಕೇಜ್ ನಿಗದಿಗೊಳಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 15 ದಿನಗಳೊಳಗೆ ಆಸ್ಪತ್ರೆಗಳು ಪಾವತಿಗೆ ಕ್ಲೇಮು ಸಲ್ಲಿಸಬೇಕು. 30 ದಿನಗಳೊಳಗೆ ಆಸ್ಪತ್ರೆಗೆ ಪಾವತಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್, ಆಯುಷ್ಮಾನ್ ನೋಡಲ್ ಅಧಿಕಾರಿ ಡಾ.ಸುದರ್ಶನ್, ಕೆಎಎಸ್ಎಸ್ ಯೋಜನೆ ಸಮನ್ವಯಾಧಿಕಾರಿ ಡಾ.ನೌಶಾದ್ ಬಾನು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್, ಕಾರ್ಯದರ್ಶಿ ಲತೇಶ್, ಕೋಶಾಧಿಕಾರಿ ಸುರೇಶ್ ನಾಯ್ಕ್, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.---