ಸಾರಾಂಶ
ಯಾಣಿಕರಿಗೆ ಉತ್ತಮ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ಜವಾಬ್ದಾರಿ ನಮ್ಮದಾಗಿದೆ. ಇದೊಂದು ವಿನೂತನ ಪ್ರಯೋಗವಾಗಿದ್ದು, ಪ್ರಯಾಣಿಕರಿಗೆ ಒಳ್ಳೆಯ ಪ್ರಯಾಣದ ಅನುಭವ ನೀಡಲು ಸಹಕಾರಿಯಾಗಿದೆ. ಸಂಸ್ಥೆಯ ಎಲ್ಲ ಬಸ್ ನಿಲ್ದಾಣಗಳನ್ನು ಸ್ಚಚ್ಚವಾಗಿಟ್ಟುಕೊಳ್ಳುವದು ನಮ್ಮ ಕರ್ತವ್ಯ.
ಹುಬ್ಬಳ್ಳಿ: “ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ " ಎಂಬ ಶೀರ್ಷಿಕೆಯಡಿ ಕೈಗೊಂಡ ಅಭಿಯಾನದ ಅ-ವರ್ಗದಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಪ್ರಥಮ ಸ್ಥಾನ, ಹುಬ್ಬಳ್ಳಿ ನಗರ ಸಾರಿಗೆ ಬಸ್ ನಿಲ್ದಾಣ ದ್ವಿತೀಯ ಸ್ಥಾನ ಹಾಗೂ ಬಾಗಲಕೋಟೆ ನವನಗರ ಬಸ್ ನಿಲ್ದಾಣ ತೃತೀಯ ಸ್ಥಾನ ಪಡೆದಿವೆ.
ಬ–ವರ್ಗದ ಬಸ್ ನಿಲ್ದಾಣಗಳಲ್ಲಿ ಅಂಕೋಲಾ ಬಸ್ ನಿಲ್ದಾಣ ಪ್ರಥಮ ಸ್ಥಾನ, ಹುಕ್ಕೇರಿ ಬಸ್ ನಿಲ್ದಾಣ ದ್ವಿತೀಯ ಸ್ಥಾನ ಹಾಗೂ ಬ್ಯಾಡಗಿ ಬಸ್ ನಿಲ್ದಾಣ ತೃತೀಯ ಸ್ಥಾನ ಪಡೆದಿವೆ.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ಜವಾಬ್ದಾರಿ ನಮ್ಮದಾಗಿದೆ. ಇದೊಂದು ವಿನೂತನ ಪ್ರಯೋಗವಾಗಿದ್ದು, ಪ್ರಯಾಣಿಕರಿಗೆ ಒಳ್ಳೆಯ ಪ್ರಯಾಣದ ಅನುಭವ ನೀಡಲು ಸಹಕಾರಿಯಾಗಿದೆ. ಸಂಸ್ಥೆಯ ಎಲ್ಲ ಬಸ್ ನಿಲ್ದಾಣಗಳನ್ನು ಸ್ಚಚ್ಚವಾಗಿಟ್ಟುಕೊಳ್ಳುವದು ನಮ್ಮ ಕರ್ತವ್ಯ ಎಂದರು.ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯವಸ್ಥಾಪಕರ ಆದೇಶದ ಮೇರೆಗೆ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಅಲ್ಲದೆ ಉತ್ತಮ ನಿರ್ವಹಣೆ ಕೈಗೊಂಡಿರುವ ಬಸ್ ನಿಲ್ದಾಣಗಳ ಮೇಲ್ವಿಚಾರಕ ಸಿಬ್ಬಂದಿಗೆ ಅಭಿನಂದನೆ ತಿಳಿಸಿದರು.
ಈ ವೇಳೆ ಅಧಿಕಾರಿಗಳಾದ ಶ್ರೀನಾಥ ಜಿ, ರವಿ ಅಂಚಿಗಾವಿ, ಜಿ. ಹನುಮೇಗೌಡ ಮತ್ತು ಇನ್ನಿತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ನವೀನಕುಮಾರ ತಿಪ್ಪಾ ನಿರೂಪಿಸಿದರು. ಕೆ.ಎಲ್. ಗುಡೆನ್ನವರ ವಂದಿಸಿದರು.