ಗೇರುಬೀಜ ಫ್ಯಾಕ್ಟರಿಗಳಿಗೆ ಲಕ್ಷಾಂತರ ರು. ವಂಚನೆ

| Published : Feb 25 2025, 12:51 AM IST

ಸಾರಾಂಶ

ಉಡುಪಿ ಜಿಲ್ಲೆ ಹೆಬ್ರಿಯ ಎರಡು ಗೇರು ಬೀಜ ಫ್ಯಾಕ್ಟರಿಗಳಿಗೆ ರಾಜಸ್ಥಾನದ ಮೂಲದ ಕಂಪನಿ ಲಕ್ಷಾಂತರ ರು. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನದ ಮನ್ನತ್ ಓವರ್ ಸೀಸ್ ಕಂಪನಿಯು ಹೆಸರಿನಲ್ಲಿ ಲಕ್ಷಾಂತರ ರು. ವಂಚನೆಯಾದ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿಯ ಎರಡು ಗೇರು ಬೀಜ ಫ್ಯಾಕ್ಟರಿಗಳಿಗೆ ರಾಜಸ್ಥಾನದ ಮೂಲದ ಕಂಪನಿ ಲಕ್ಷಾಂತರ ರು. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ರಾಜಸ್ಥಾನದ ಮನ್ನತ್ ಓವರ್ ಸೀಸ್ ಕಂಪನಿಯು ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆಯಾದ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಹೆಬ್ರಿಯ ಕೋಮಲ್ ಕ್ಯಾಶೂಸ್‌ ಸಂಸ್ಥೆಗೆ ರಾಜಸ್ಥಾನ ಮೂಲದ ಮನ್ನತ್ ಓವರ್ ಸೀಸ್ ಕಂಪನಿ ಹೆಸರಿನಲ್ಲಿ ಆಪಾದಿತರಾದ ರಾಜಸ್ಥಾನದ ರವಿ ಲಾಲ್ವಾನಿ, ಗೋಪಾಲ ಲಾಲ್ವಾನಿ, ಮೋಹನ್ ಲಾಲ್ವಾನಿ ಮತ್ತು ಕನ್ನಯ್ಯ ಲಾಲ್ವಾನಿ ಎರಡು ಮೂರು ಬಾರಿ ಭೇಟಿ ನೀಡಿದ್ದರು. ಕ್ಯಾಶ್ಯೂ ಕರ್ನಲ್‌ಗಳನ್ನು ತಮಗೆ ಸರಬರಾಜು ಮಾಡಬೇಕಾಗಿ ವ್ಯವಹಾರ ನಡೆಸಿದ್ದು, ಆರಂಭಿಕ ಹಂತಗಳಲ್ಲಿ ಗೇರು ಬೀಜ ಕರ್ನಲ್ ತೆಗೆದುಕೊಂಡಿರುವುದಕ್ಕೆ ಹಣ ಪಾವತಿ ಮಾಡಿರುತ್ತಾರೆ. ಆದರೆ, 2023ರ ಮೇ 2ರಂದು ವಿವಿಧ ಗ್ರೇಡ್‌ನ 8,41,050 ರೂ. ಮೌಲ್ಯದ, ಮೇ 15ರಂದು 12,49,550 . ಮೌಲ್ಯದ 2023 ಜೂ.22ರಂದು 10,82,550 ರು. ಮೌಲ್ಯದ ಸೇರಿದಂತೆ ಒಟ್ಟು 31,73,100 ರು. ಮೌಲ್ಯದ ಗೇರು ಬೀಜ ತಿರುಳನ್ನು ಅವರ ಬೇಡಿಕೆ ಮೇರೆಗೆ ಜಿ.ಎಸ್.ಟಿ. ಬಿಲ್ ಮುಖಾಂತರ ಸರಬರಾಜು ಮಾಡಿಕೊಂಡಿದ್ದರು. ಬಳಿಕ ಹಣ ನೀಡದೆ ಮೊಬೈಲ್‌ ಸ್ವಿಚಾಫ್‌ ಮಾಡಿ ಮೋಸ ಮಾಡಿದ್ದಾಗಿ ಕೋಮಲ್ ಕ್ಯಾಶೂಸ್‌ನ ಮ್ಯಾನೆಂಜಿಂಗ್‌ ಪಾರ್ಟನ‌ರ್ ಶಿವಪುರದ ಶಿವ ಪ್ರಸಾದ್‌ ಎಂ. ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣ:

ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಮುದ್ರಾಡಿಯ ನ್ಯೂ ರಾಮನಾಥ್ ಕ್ಯಾಶ್ ಇಂಡಸ್ಟ್ರಿಸ್ ಸಂಸ್ಥೆಯಿಂದ ರಾಜಸ್ಥಾನ ಮೂಲದ

ನಂಬ‌ರ್ ಹೊಂದಿರುವ ಮನ್ನತ್ ಓವರ್ ಸೀಸ್ ಕಂಪನಿ ಹೆಸರಿನಲ್ಲಿ ಕ್ಯಾಶ್ ಕರ್ನಲ್‌ಗಳನ್ನು ಸರಬರಾಜು ಮಾಡಿಕೊಳ್ಳುತ್ತಿದ್ದು, ಮೊದಲು ಹಣ ಪಾವತಿಸಿದ್ದರು. ಆದರೆ, 2023ರ ಮೇ 12ರಂದು ವಿವಿಧ ಗ್ರೇಡ್‌ನ 5,82,540 ರೂ. ಮೌಲ್ಯದ ಗೇರು ಬೀಜ ತಿರುಳನ್ನು ಸರಬರಾಜು ಮಾಡಿಕೊಂಡಿದ್ದು ಹಣ ಪಾವತಿಸದೆ ಮೊಬೈಲ್ ಸಂಪರ್ಕಕ್ಕೂ ಸಿಗದೆ ಮೋಸ ಮಾಡಿದ್ದಾರೆ. ಈ ಬಗ್ಗೆ ನ್ಯೂ ರಾಮನಾಥ್ ಕ್ಯಾಶ್ ಇಂಡಸ್ಟ್ರೀಸ್‌ನ ಮ್ಯಾನೆಂಜಿಂಗ್ ಪಾರ್ಟನರ್ ಹೆಬ್ರಿಯ ಅನಂತ ಪದ್ಮನಾಭ ನೀಡಿದ ದೂರಿನಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.