ವೆಂಕಟೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಹೆಸರೆತ್ತಿ ಅವಮಾನಿಸಿದ್ದಲ್ಲದೆ, ಕೆನ್ನೆಗೆ ಬಲವಾಗಿ ಹೊಡೆದ ಪರಿಣಾಮ ರಕ್ತಸ್ರಾವ ಉಂಟಾಗಿದೆ.

ಚೇಳೂರು: ಪೆಟ್ರೋಲ್ ಬಂಕ್‌ನಲ್ಲಿ ಹಣದ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ದಲಿತ ಯುವಕನ ಮೇಲೆ ಜಾತಿ ನಿಂದನೆ ಹಾಗೂ ಹಲ್ಲೆ ನಡೆಸಿದ ಘಟನೆ ತಾಲೂಕಿನ ಚಾಕವೇಲು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಘಟನೆಯ ವಿವರ:

ಚಾಕವೇಲು ಗ್ರಾಮದ ನಿವಾಸಿ ವೆಂಕಟೇಶ್ (30) ಎಂಬುವವರು ಕಳೆದ ಬುಧವಾರ (ಡಿ. 31) ಮಧ್ಯಾಹ್ನ ಪೆಟ್ರೋಲ್ ಬಂಕ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಬೈಯ್ಯಾರೆಡ್ಡಿ ಎಂಬುವವರಿಗೆ 500 ರು. ಫೋನ್-ಪೇ ಮಾಡುತ್ತೇನೆ, ನಗದು ಹಣ ಕೊಡಿ ಎಂದು ಕೇಳಿದ್ದಾರೆ.

ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕಿರಿ ಉಂಟಾಗಿದೆ. ಆಗ ಅಲ್ಲಿಗೆ ಬಂದ ಬೈಯ್ಯಾರೆಡ್ಡಿಯವರ ಮಗ ಮನುಮೋಹನ್ ರೆಡ್ಡಿ ಎಂಬುವವರು ವೆಂಕಟೇಶ್ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ವೆಂಕಟೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಹೆಸರೆತ್ತಿ ಅವಮಾನಿಸಿದ್ದಲ್ಲದೆ, ಕೆನ್ನೆಗೆ ಬಲವಾಗಿ ಹೊಡೆದ ಪರಿಣಾಮ ರಕ್ತಸ್ರಾವ ಉಂಟಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ನೀಡಿದ ದೂರಿನಲ್ಲಿ ದಾಖಲಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಭೇಟಿ:

ಈ ಘಟನೆಗೆ ಸಂಬಂಧಿಸಿದಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ (ಜ. 2) ಚಿಂತಾಮಣಿ ಡಿವೈಎಸ್ಪಿ ಶಿವಕುಮಾರ್ ಹಾಗೂ ಚೇಳೂರು ಪಿಎಸ್‌ಐ ಹರೀಶ್ ಅವರು ಚಾಕವೇಲು ಗ್ರಾಮದ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು.

ಘಟನಾ ಸ್ಥಳದಲ್ಲಿದ್ದ ಸಾಕ್ಷಿಗಳ ವಿಚಾರಣೆ ನಡೆಸಿದ ಅಧಿಕಾರಿಗಳು, ಪೆಟ್ರೋಲ್ ಬಂಕ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಪ್ರಕರಣದ ತನಿಖೆ ನಡೆಯುತ್ತಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ಸಣ್ಣ ಮಟ್ಟದ ಆತಂಕ ಮನೆ ಮಾಡಿದ್ದು, ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಸ್ಥಳೀಯರು ಹಾಗೂ ದಲಿತ ಮುಖಂಡರು ಒತ್ತಾಯಿಸಿದ್ದಾರೆ.