ದೇಶದಲ್ಲಿ ಜಾತಿ ವಿನಾಶ ಎಂದಿಗೂ ಸಾಧ್ಯವಿಲ್ಲ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು

| Published : Jul 06 2025, 11:48 PM IST

ದೇಶದಲ್ಲಿ ಜಾತಿ ವಿನಾಶ ಎಂದಿಗೂ ಸಾಧ್ಯವಿಲ್ಲ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಜಾತಿ ಸಂಘಟನೆ ಬಹಳ ಮುಖ್ಯ. ಜಾತಿಗಳು ಎಂದಿಗೂ ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಾಶವಾಗುವುದೂ ಇಲ್ಲ. ಜಾತ್ಯತೀತ ಎನ್ನುವುದು ಮಾದರಿಯಷ್ಟೇ. ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗದು. ಸತ್ಯ ಎನ್ನುವುದೂ ಒಂದು ಮಾದರಿಯಷ್ಟೇ. ಅದನ್ನು ಪೂರ್ಣವಾಗಿ ಕಂಡುಕೊಳ್ಳಲಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲಿ ಜಾತಿ ವಿನಾಶ ಎಂದಿಗೂ ಸಾಧ್ಯವಿಲ್ಲ. ಆದರೆ, ಜಾತಿಗಳೊಂದಿಗೆ ಸಂಘರ್ಷಕ್ಕಿಳಿಯದೆ ಸಾಮರಸ್ಯದೊಂದಿಗೆ ಜೀವನ ನಡೆಸುವುದು ಅವಶ್ಯವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್, ಕುಂಬಾರರ ಜಾಗೃತಿ ವೇದಿಕೆ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜಾತಿ ಸಂಘಟನೆ ಬಹಳ ಮುಖ್ಯ. ಜಾತಿಗಳು ಎಂದಿಗೂ ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಾಶವಾಗುವುದೂ ಇಲ್ಲ. ಜಾತ್ಯತೀತ ಎನ್ನುವುದು ಮಾದರಿಯಷ್ಟೇ. ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗದು. ಸತ್ಯ ಎನ್ನುವುದೂ ಒಂದು ಮಾದರಿಯಷ್ಟೇ. ಅದನ್ನು ಪೂರ್ಣವಾಗಿ ಕಂಡುಕೊಳ್ಳಲಾಗುವುದಿಲ್ಲ ಎಂದರು.

ಜಾತಿಗಳು ಸಂಘಟನೆಯಾಗುವುದು ಅಭಿವೃದ್ಧಿಗಾಗಿ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರುವುದಕ್ಕೆ ಸಂಘಟನೆ ಅವಶ್ಯಕವಾಗಿದೆ. ಈ ಭರದಲ್ಲಿ ಉಳಿದ ಜಾತಿಗಳನ್ನು ಹಿಂದಿಕ್ಕುವ ಪ್ರಯತ್ನ ಮಾಡಬಾರದು. ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮೇಲುಸ್ತರಕ್ಕೆ ಬರಲು ಪ್ರಯತ್ನಿಸಬೇಕು ಎಂದರು.

ಪ್ರತಿಯೊಂದು ಜಾತಿಯವರು ಅವರವರ ಜಾತಿಯನ್ನು ಪ್ರೀತಿಸುತ್ತಾ ಗೌರವಿಸುತ್ತಾರೆ. ಜಾತಿಗಳು ಅಭಿವೃದ್ಧಿಯಾಗಬೇಕಾದರೆ ಮೊದಲು ಕೀಳರಿಮೆಯನ್ನು ತೊರೆಯಬೇಕು. ಶಿಕ್ಷಣವಂತರಾಗಿ, ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಯಾವುದೇ ಜಾತಿಯವರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.

ಎಲ್.ಸಂದೇಶ್ ಸರಳ ವ್ಯಕ್ತಿ, ಪ್ರಬುದ್ಧ ಪತ್ರಕರ್ತ. ಕಷ್ಟದಿಂದ ಬೆಳೆದುಬಂದವರು. ಕಾವೇರಿ ಹೋರಾಟದ ಇತಿಹಾಸವನ್ನು ಚೆನ್ನಾಗಿ ಅರಿತವರು. ಸಂಘಟನಾ ಸಾಮರ್ಥ್ಯವಿರುವವರು. ತುಂಬಾ ಶ್ರಮಜೀವಿಯೂ ಆಗಿದ್ದಾರೆ ಎಂದರು.

ಬಿಬಿಎಂಪಿ ಸಹಾಯಕ ಆಯುಕ್ತ ದಿಲೀಪ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಈ ಪ್ರೋತ್ಸಾಹದೊಂದಿಗೆ ಮತ್ತಷ್ಟು ಸಾಧನೆಗೆ ಪ್ರೇರಣೆ ಪಡೆಯಬೇಕು. ಎಸ್ಸೆಸ್ಸೆಲ್ಸಿ ನಂತರ ನಿಮಗೆ ರೆಕ್ಕೆ ಬಿಚ್ಚುವ ಸಮಯ. ನಿಮ್ಮ ರೆಕ್ಕೆಯನ್ನು ದೊಡ್ಡದಾಗಿ ಬಿಚ್ಚುವಿರೋ ಅಷ್ಟು ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಮಕ್ಕಳ ಜೊತೆ ಪೋಷಕರು ತಾಳ್ಮೆ, ಸಂಯಮದಿಂದ, ಸ್ನೇಹಿತರಂತೆ ನಡೆದುಕೊಳ್ಳಬೇಕು. ನಾವು ಮಕ್ಕಳನ್ನು ಗಿಳಿಸಾಕಿದಂತೆ ಸಾಕಿರುತ್ತೇವೆ. ಆದರೆ, ಹೊರಗಿನ ಪ್ರಪಂಚ ಅಷ್ಟೊಂದು ಮುಗ್ಧತೆಯಿಂದ ಕೂಡಿಲ್ಲ. ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸಜ್ಜುಗೊಳಿಸಬೇಕು. ಪ್ರಾಪಂಚಿಕ ಜ್ಞಾನವನ್ನು ಬೆಳೆಸುವುದರೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಸ್ವತಂತ್ರವಾಗಿ ಬದುಕುವುದನ್ನು ಕಲಿಸುವಂತೆ ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂಬಾರರ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ, ಹಾಸನದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಪ್ರಕಾಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗುರುರಾಜು, ಟ್ರಸ್ಟಿಗಳಾದ ಗಿರೀಶ್, ಭೀಮಪ್ಪ, ಕಾಂತರಾಜು, ಮಹೇಶ್, ಪ್ರದೀಪ್ ಇತರರಿದ್ದರು.