ಜಾತಿಗಣತಿ ಅಧಿಕಾರ ಕೇಂದ್ರಕ್ಕೆ ಮಾತ್ರ: ಎಂಎಲ್ಸಿ ಸಿ.ಟಿ.ರವಿ

| Published : Apr 14 2025, 01:17 AM IST

ಸಾರಾಂಶ

ಜನ ಗಣತಿ, ಜಾತಿ ಗಣತಿ ಮಾಡುವ ಅಧಿಕಾರ ಸಂವಿಧಾನ ಬದ್ಧವಾಗಿ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಇದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಾವು ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಲೆಕ್ಕ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ । ವಕ್ಫ್‌ ಕಾಯ್ದೆ ವಿರುದ್ಧ ಅಪಪ್ರಚಾರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜನ ಗಣತಿ, ಜಾತಿ ಗಣತಿ ಮಾಡುವ ಅಧಿಕಾರ ಸಂವಿಧಾನ ಬದ್ಧವಾಗಿ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಇದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಾವು ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಡೆಸಿದ್ದ ಜಾತಿ ಗಣತಿ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಅನಧಿಕೃತವಾಗಿ ಸೋರಿಕೆಯಾಗಿರುವ ವರದಿಯನ್ನು ಸತ್ಯ ಎಂದು ಭಾವಿಸಿದರೆ ಅದು ಚರ್ಚೆಯನ್ನು ಹುಟ್ಟು ಹಾಕುತ್ತದೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರು ಯಾರು ಎಂದು ಪ್ರಶ್ನಿಸಿದ ಸಿ.ಟಿ. ರವಿ, ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯ ಅಲ್ಪಸಂಖ್ಯಾತರಾಗುತ್ತಾರೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದಾಗ ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಎಂದು ಹೇಳಿದರು.

ಸಮಾಜವನ್ನು ಒಡೆಯುವ ದುರುದ್ದೇಶವನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ. ಕೆಲ ವ್ಯಕ್ತಿ, ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಹಿಂದೂ ಸಮಾಜವನ್ನು ಜಾತಿವಾರು ಒಡೆಯುವ ಕೆಲಸ ಮಾಡುತ್ತಿವೆ. ಮುಸ್ಲಿಂ ಸಮುದಾಯದಲ್ಲಿಯೂ 56 ಜಾತಿಗಳಿವೆ. ಅಲ್ಲಿಯೂ ಮುಟ್ಟಿಸಿಕೊಳ್ಳದ ಅಸ್ಪೃಶ್ಯ (ಅನ್ ಟಚೆಬಲ್ಸ್) ಇದ್ದಾರೆ. ಅವರ ಬಗ್ಗೆ ಯಾರು ಚರ್ಚೆ ಮಾಡುವುದಿಲ್ಲ. ಪಸ್ಮಾಂಡ ಮುಸ್ಲಿಮರು ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಎಂದು ಭಾವಿಸಿದ್ದಾರೆಯೋ ಅವರು ಈ ಸಮುದಾಯವರಿಗೆ ಹೆಣ್ಣು ಕೊಡುವುದೂ ಇಲ್ಲ, ತರುವುದೂ ಇಲ್ಲ. ಮುಸ್ಲಿಮರನ್ನು ಇಡಿಯಾಗಿ ಇಡುವ ಹಾಗೂ ಹಿಂದೂಗಳನ್ನು ಒಡೆದಾಳುವ ನೀತಿಗೆ ನಾವು ಬೆಂಬಲ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆ ಎಂದು ಹೇಳಿದರು.

ವಕ್ಫ್ ಮಸೂದೆ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾಗಿ ವಕ್ಫ್‌ಗೆ ಸೇರಿದ ಜಮೀನನ್ನು ಯಾರು ಕಿತ್ತುಕೊಳ್ಳುವುದಿಲ್ಲ. ಅಕ್ರಮವಾಗಿರುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನದ ಜಮೀನನ್ನು ನಮ್ಮದೇ ಎನ್ನುತ್ತಾರೆ. ಇಂಥ ಆಸ್ತಿಗಳನ್ನು ಬಿಡಲೇಬೇಕು. ವಿಧಾನಸೌಧ ಸುಪ್ರೀಂ ಕೋರ್ಟ್ ಹೈಕೋರ್ಟ್ ಎಲ್ಲವೂ ನಮ್ಮದೇ ಎನ್ನಲು ಅವರಿಗೆ ಅವಕಾಶ ನೀಡಬೇಕೆ ಎಂದು ಪ್ರಶ್ನಿಸಿದರು.

ಅಕ್ರಮಕ್ಕೆ ಅವಕಾಶವಿಲ್ಲ. ನ್ಯಾಯ ಬದ್ಧವಾಗಿದ್ದರೆ ಅದಕ್ಕೂ ದಾಖಲೆ ನೋಡುತ್ತಾರೆ. ಗ್ರ್ಯಾಂಟ್, ದಾನ ಕೊಟ್ಟಿದ್ದಾರೆಯೇ, ಆಸ್ತಿ ಕೊಂಡಿದ್ದಾರೆಯೇ ಎಂಬುದನ್ನು ನೋಡುವುದರಲ್ಲಿ ತಪ್ಪೇನಿದೆ. ಮಸೀದಿ ಕಿತ್ತುಕೊಳ್ಳುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಅಪಪ್ರಚಾರಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ರಾಷ್ಟ್ರ ಘಾತುಕ ಎಂದರು.

ಭಯೋತ್ಪಾದನೆ ಜಾಲ ವಿಸ್ತರಣೆ

ಭಯೋತ್ಪಾದಕ ಸಂಘಟನೆಗಳು, ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳು ಸಂದರ್ಭದಲ್ಲಿ ಲಾಭ ಪಡೆದು ಭಯೋತ್ಪಾದನೆ ಜಾಲದ ವಿಸ್ತರಣೆ ಸಂಚು ಮಾಡುತ್ತಿವೆ ಎಂದು ಸಿ.ಟಿ.ರವಿ ಆರೋಪಿಸಿದರು.

ಕಾಂಗ್ರೆಸ್ ಕಾರ್ಪೊರೇಟರ್ ಕಬೀರ್ ಖಾನ್ ಒಂದೊಂದು ಊರಿನಲ್ಲಿ 10 ಹೆಣ ಬೀಳಬೇಕು. ಬಸ್ಸು, ರೈಲು ಸುಡಬೇಕು. ಎಲ್ಲೆಡೆಯೂ ದುಂಬಿ ನಡೆಯಬೇಕು ಆಗ ಮಾತ್ರ ಎಲ್ಲರನ್ನೂ ಬಗ್ಗಿಸಬಹುದು ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಭಯೋತ್ಪಾದನೆ ನಡೆಸಬೇಕು ಎನ್ನುತ್ತಾನೆ. ಇಂಥ ದೇಶ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಪಕ್ಷ ಇದುವರೆಗೂ ಕಿತ್ತು ಹಾಕಿಲ್ಲ. ಯಾರೂ ಫತ್ವಾ ಹೊರಡಿಸಿಲ್ಲ. ಮುಸ್ಲಿಂ ಸಂಘಟನೆಯು ಇದನ್ನು ತಪ್ಪು ಎಂದು ಎಲ್ಲಿಯೂ ಹೇಳಿಲ್ಲ. ಇದರಿಂದ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳಬೇಕು ಎಂದು ಸಂಚು ನಡೆದಿರುವುದು ಸ್ಪಷ್ಟವಾಗಿದೆ ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್ ನಿಲುವು ರಾಷ್ಟ್ರ ಘಾತುಕ

ವಕ್ಫ್ ಬೋರ್ಡ್ ಕಾಯ್ದೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹಿಂದೆ ಸಿಎಎ ವಿರುದ್ಧವು ಕಾಂಗ್ರೆಸ್ ಇದೇ ರೀತಿ ಅಪಪ್ರಚಾರ ಮಾಡಿತ್ತು. ಇಂಥ ನಿಲುವುಗಳು ಕಾಂಗ್ರೆಸ್ ಪಕ್ಷದ ರಾಷ್ಟ್ರ ಘಾತುಕ ನಿಲುವುಗಳಾಗಿವೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.