ಸಾರಾಂಶ
ಸ್ವಾಭಿಮಾನಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಕುಗ್ಗಿಸುವ ಉದ್ದೇಶದಿಂದ ಅವೈಜ್ಞಾನಿಕವಾಗಿರುವ ಕಾಂತರಾಜು ವರದಿಯನ್ನು ಬಳಕೆ ಮಾಡಲಾಗುತ್ತಿದೆ. ರಾಜ್ಯದ ಯಾರ ಮನೆಗೂ ಭೇಟಿ ನೀಡದೆ ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ಜಾತಿಗಣತಿ ಮಾಡಲಾಗಿದೆ.
ಗಂಗಾವತಿ:
ಜಾತಿ ಗಣತಿ ಲಿಂಗಾಯತ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ಅವೈಜ್ಞಾನಿಕವಾಗಿರುವ ಕಾಂತರಾಜು ವರದಿ ಆಧರಿಸಿ ಜಾತಿಗಣತಿ ನಡೆಸಿರುವುದು ಸರಿಯಲ್ಲ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದ ಬೈಪಾಸ್ ರಸ್ತೆಯಲ್ಲಿ ನೂತನ ರಥಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ವಾಭಿಮಾನಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಕುಗ್ಗಿಸುವ ಉದ್ದೇಶದಿಂದ ಅವೈಜ್ಞಾನಿಕವಾಗಿರುವ ಕಾಂತರಾಜು ವರದಿಯನ್ನು ಬಳಕೆ ಮಾಡಲಾಗುತ್ತಿದೆ. ರಾಜ್ಯದ ಯಾರ ಮನೆಗೂ ಭೇಟಿ ನೀಡದೆ ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ಜಾತಿಗಣತಿ ಮಾಡಲಾಗಿದೆ ಎಂದು ಕಿಡಿಕಾರಿದರು.10 ವರ್ಷಗಳ ಜಾತಿಗಣತಿ ಒಪ್ಪಿಕೊಳ್ಳುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ಸಮಾಜ ತುಳಿಯಬಾರದು. ಸದ್ಯದ ಜಾತಿಗಣತಿಯನ್ನು ಎಲ್ಲ ಸಮುದಾಯಗಳ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ರೀತಿಯ ಸರ್ವೇ ನಡೆಸದೆ ಇದೇ ಜಾತಿಗಣತಿ ಎಂದು ಜನರನ್ನು ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ. ಕೂಡಲೇ ಮುಖ್ಯಮಂತ್ರಿಗಳು ಕಾಂತರಾಜ್ ವರದಿ ತಿರಸ್ಕರಬೇಕೆಂದು ಒತ್ತಾಯಿಸಿದರು.
ಸರ್ಕಾರದಲ್ಲಿರುವ 7 ಲಿಂಗಾಯತ ಸಚಿವರು ಒಕ್ಕಲಿಗ ಶಾಸಕರ ಜತೆ ಸಭೆ ಮಾಡಬೇಕೆಂದು ಸಲಹೆ ನೀಡಿದ ಶ್ರೀಗಳು, ಶಾಸಕರು ರಾಜೀನಾಮೆ ಕೊಟ್ಟರೆ ಪರಿಹಾರ ಆಗುವುದಿಲ್ಲ ಎಂದರು.ಯಾವುದೇ ಸಮುದಾಯಕ್ಕೆ ಅನ್ಯಾಯವಾಗದೆ ನ್ಯಾಯಯುತವಾಗಿ ಸರ್ವೇ ನಡೆಸುವ ಮೂಲಕ ಜಾತಿಗಣತಿ ಮಾಡಲಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.