ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗಣತಿ ಸರಿಯಲ್ಲ: ಸಂಸದ ಡಾ. ಮಂಜುನಾಥ್‌

| Published : Apr 15 2025, 12:46 AM IST

ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗಣತಿ ಸರಿಯಲ್ಲ: ಸಂಸದ ಡಾ. ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಸಂವಿಧಾನವೇ ಜಾತಿ ವ್ಯವಸ್ಥೆ ಬೇಡ ಎಂದು ಹೇಳಿರುವಾಗ ಸರ್ಕಾರ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಸಂವಿಧಾನವೇ ಜಾತಿ ವ್ಯವಸ್ಥೆ ಬೇಡ ಎಂದು ಹೇಳಿರುವಾಗ ಸರ್ಕಾರ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶಾದ್ಯಂತ ನಾವೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಭಾರತ ದೇಶ ಜಾತ್ಯತೀತ ರಾಷ್ಟ್ರವಾಗಿದ್ದು, ಜಾತಿಗಣತಿಗೆ ಯಾವುದೇ ಮಹತ್ವ ಕೊಡುವ ಅಗತ್ಯವಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ, ಆರ್ಥಿಕ ಹಿನ್ನೆಲೆಯ ಬಗ್ಗೆ ಸಮೀಕ್ಷೆ ಮಾಡಲಿ, ಅದನ್ನು ಬಿಟ್ಟು ಜಾತಿಗಣತಿ ಹೆಸರಿನಲ್ಲಿ ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಠಿಸುವ ಕೆಲಸ ಮಾಡಬಾರದು. ಎಲ್ಲಾ ಜಾತಿ, ವರ್ಗದಲ್ಲೂ ಬಡವರಿದ್ದು ಹಿಂದುಳಿದಿದ್ದಾರೆ, ಅವರನ್ನು ಮೇಲೆತ್ತುವ ಕೆಲಸ ಆಗಬೇಕಿದೆ. ಜಾತಿಗಣತಿ ಏಕೆ ಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಕಾಏಕಿ ಸರ್ಕಾರ ಜಾತಿಗಣತಿ ಸ್ವೀಕಾರ ಮಾಡುವುದಕ್ಕಿಂತ ಮೊದಲು ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚೆ ಮಾಡಬೇಕು. ತಜ್ಞರು, ಚಿಂತಕರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಲೆಜೆಸ್ಲೇಟಿವ್ ಕಮಿಟಿ ರಚನೆ ಮಾಡಿ ಈ ಬಗ್ಗೆ ಪರಿಶೀಲನೆ ಮಾಡಬೇಕು. ಅದನ್ನು ಬಿಟ್ಟು ಸರ್ಕಾರ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಆತುರದ ನಿರ್ಧಾರ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ಯುಗ ಪುರುಷರಾಗಿದ್ದು, ಎಲ್ಲ ಸಮುದಾಯದವರು ಒಂದೇ ಎಂಬ ಪರಿಕಲ್ಪನೆಯಂತೆ ಸಮಾನತೆ ಕಲ್ಪಿಸಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಾನವತಾವಾದಿ. ಅವರ ಸೇವೆ ನಿಶ್ವಾರ್ಥ ಸೇವೆಯಾಗಿದ್ದು, ಅವರ ಆದರ್ಶ, ತತ್ವ, ಸಿದ್ದಾಂತ, ಮೂಲ ಉದ್ದೇಶ, ಆಚಾರ-ವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಪ್ರಪಂಚದಲ್ಲಿಯೇ ಭಾರತ ಅತೀದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಅಂಬೇಡ್ಕರ್ ಕೊಟ್ಟ ಸಂವಿ ಧಾನ ಬಹಳ ಗಟ್ಟಿಯಾಗಿದೆ. ಇಂದಿನ ಯುವ ಪೀಳಿಗೆಗೆ ಅವರ ನಿಸ್ವಾರ್ಥ ಸೇವೆ, ಸಾಮಾಜಿಕ ಕೊಡುಗೆಯನ್ನು ನೆನಪಿಸುವುದು ಜಯಂತಿ ಆಚರಣೆಯ ಮೂಲ ಉದ್ದೇಶವಾಗಬೇಕಿದೆ ಎಂದರು.

ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುವ ಅಪಪ್ರಚಾರ ನಡೆಯುತ್ತಿವೆ. ಕೇಂದ್ರದಲ್ಲಿ ಬಿಜೆಪಿಗೆ 303 ಸದಸ್ಯರ ಬಹುಮತವಿದ್ದಾಗಲೇ ಸಂವಿಧಾನ ಬದಲಾವಣೆ ಮಾಡಿಲ್ಲ. ಮೋದಿ ಸಂವಿಧಾನ ಬದಲಾವಣೆ ಮಾಡುತ್ತಾರೆಯೇ ಆಗಾಗಿ ಜನರು ಅಪಪ್ರಚಾರಕ್ಕೆ ಯಾರು ಕೂಡ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಲಿಂಗಪ್ಪ, ದಿಶಾ ಸದಸ್ಯ ರಾಜೇಶ್.ಜೆ ಮೈತ್ರಿ ಪಕ್ಷಗಳ ಮುಖಂಡರಾದ ಉಮೇಶ್, ಸುಗ್ಗನಹಳ್ಳಿರಾಮಕೃಷ್ಣಯ್ಯ, ಬಾಲಗೇರಿರವಿ, ಶಿವಕುಮಾರಸ್ವಾಮಿ, ಪದ್ಮನಾಭ್, ಆರ್.ವಿ.ಸುರೇಶ್, ಬೋರೇಗೌಡ, ಎ.ಜೆ.ಸುರೇಶ್, ಶೋಭಾ.ಆರ್ ಗೌಡ, ರುದ್ರದೇವರು, ಜಯ್‌ಕುಮಾರ್, ಕೆಂಪರಾಜುಯಿತರರಿದ್ದರು.