ಸಾರಾಂಶ
ಯಾವ ಜಾತಿಗೂ ಅನ್ಯಾಯವಾಗಬಾರದು. ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯರು ಇದ್ದೀರಿ ಎಂದು ಯಾರೂ ಕೇಳಿಲ್ಲ, ಹೀಗೆ ಯಾವ ಜಾತಿಯ ಜನರ ಮನೆಗೂ ಹೋಗಿಲ್ಲ
ಹಾವೇರಿ: ನಾವು ಯಾವ ಜಾತಿಯ ವಿರೋಧಿಗಳು ಅಲ್ಲ. ಆದರೆ, ಸರ್ಕಾರ ಮಾಡಿರುವ ಜಾತಿ ಗಣತಿ ವರದಿಯ ಸಮೀಕ್ಷೆ ವೈಜ್ಞಾನಿಕವಾಗಿಲ್ಲ, ಹೀಗಾಗಿ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಜಾತಿಗೂ ಅನ್ಯಾಯವಾಗಬಾರದು. ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯರು ಇದ್ದೀರಿ ಎಂದು ಯಾರೂ ಕೇಳಿಲ್ಲ, ಹೀಗೆ ಯಾವ ಜಾತಿಯ ಜನರ ಮನೆಗೂ ಹೋಗಿಲ್ಲ, ಈ ಊರಲ್ಲಿ, ಈ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಯಾವ್ಯಾವ ಜಾತಿಯರು ಎಷ್ಟು ಜನ ಇದ್ದಾರೆ ಎಂಬುದು ನಿಖರವಾಗಿರಬೇಕು. ಸುಮ್ನೆ ಕಟ್ಟೆ ಮೇಲೆ ಕುಳಿತು ಶಾನಭೋಗಕಿ ಮಾಡಿಕೊಂಡು ಸಿದ್ಧಪಡಿಸಿರುವ ಹಳಸಿದ ವರದಿ ಇದಾಗಿದೆ ಎಂದು ವ್ಯಂಗ್ಯವಾಡಿದರು.2013ರಲ್ಲಿ ಆಗಿರುವ ಗಣತಿ ಇದು. ಆರ್ಥಿಕ, ಸಾಮಾಜಿಕ ಗಣತಿ ಎಂದು ಮಾಡಿ ಈಗ ಜಾತಿ ಗಣತಿ ಎನ್ನುತ್ತಿದ್ದಾರೆ. ಹೀಗಾಗಿ ಈ ವರದಿ ಸರಿ ಇಲ್ಲ, ಮತ್ತೊಮ್ಮೆ ಪ್ರತಿಯೊಂದು ಮನೆಗೂ ಹೋಗಿ ವೈಜ್ಞಾನಿಕ, ಸವಿಸ್ತಾರವಾಗಿ ಜಾತಿ ಗಣತಿ ಮಾಡಬೇಕು. ಈಗ ಮಂಡಿಸುತ್ತಿರುವ ವರದಿ ವೈಯಕ್ತಿಕ ಲಾಲಸೆಗೆ, ಖುರ್ಚಿ ಭದ್ರತೆಗೆ ಮಾತ್ರ ಎಂದು ಕಿಡಿಕಾರಿದರು.
2013-18ರ ಅವಧಿಯಲ್ಲಿ ಸಮೀಕ್ಷೆ ಮಾಡಲಾಗಿತ್ತು. ಆಗ ವರದಿ ಪ್ರೇಶ್ ಆಗಿತ್ತು. ಆಗಲೇ ಅದನ್ನು ಮಂಡಿಸಬಹುದಿತ್ತು. ಈಗ ನಿಮ್ಮ ಖುರ್ಚಿ ಅಲ್ಲಾಡುತ್ತಿದೆ ಅಂತಾ ಹೇಳಿ ಜನರ ಮನಸ್ಸು ಬೇರೆಡೆ ಸೆಳೆಯಲು ಹಳಸಿದ ವರದಿ ಮಂಡಿಸಲು ಮುಂದಾಗಿರೋದು ಸರಿಯಲ್ಲ, ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.