ಸಾರಾಂಶ
ಹಲವು ಬಾರಿ ಮುಂದೂಡಲ್ಪಟ್ಟಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತ ವಿಷಯ ಗುರುವಾರ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಈ ಬಾರಿಯಾದರೂ ನಿರ್ಣಾಯಕ ತೀರ್ಮಾನ ಆಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಲವು ಬಾರಿ ಮುಂದೂಡಲ್ಪಟ್ಟಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತ ವಿಷಯ ಗುರುವಾರ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಈ ಬಾರಿಯಾದರೂ ನಿರ್ಣಾಯಕ ತೀರ್ಮಾನ ಆಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.ಮೇ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆಗೆ ಬಂದಿತ್ತು. ಆದರೆ, ಈ ವೇಳೆ ಇನ್ನೂ ಕೆಲ ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸಿಲ್ಲ. ಕೆಲ ಸಚಿವರು ಒಂದೇ ಅಭಿಪ್ರಾಯ ಹೊಂದಿರುವ ಪತ್ರಕ್ಕೆ ಸಾಮೂಹಿಕವಾಗಿ ಸಹಿ ಹಾಕಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅಂತಹ ಅಭಿಪ್ರಾಯಗಳನ್ನು ತಿರಸ್ಕರಿಸಲಾಗಿತ್ತು. ಮುಂದಿನ ಸಂಪುಟ ಸಭೆಯಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಮೂಲಗಳ ಪ್ರಕಾರ ಲಿಂಗಾಯತ ಸಚಿವರು ಸೇರಿ ಬಹುತೇಕರು ಅಭಿಪ್ರಾಯ ಮಂಡನೆ ಮಾಡಿದ್ದಾರೆ. ಹೀಗಾಗಿ ಗುರುವಾರ ಸಚಿವರ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆದರೆ ಸಮೀಕ್ಷಾ ವರದಿ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.ವಿವಿಧ ಆಯಾಮದಲ್ಲಿ ಚರ್ಚೆ ಸಾಧ್ಯತೆ:
ಸಭೆಯಲ್ಲಿ ಲಿಂಗಾಯತ ಸಚಿವರು ಸಮೀಕ್ಷಾ ವರದಿ ವಿರೋಧಿಸುವ ಸಾಧ್ಯತೆಯಿದೆ. ಈ ಸಚಿವರನ್ನು ಹೇಗೆ ಮನವೊಲಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಸಚಿವರ ನಡುವೆ ಅನಗತ್ಯ ತಿಕ್ಕಾಟ ಬೇಡ ಎಂದಾದರೆ, ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯ ಏನು? ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಮುಂದಿಟ್ಟುಕೊಂಡು ಚರ್ಚಿಸುವ ನೆಪದಲ್ಲಿ ಸಂಪುಟ ಸಭೆಯನ್ನು ಮತ್ತೊಮ್ಮೆ ಮುಂದೂಡುವ ಸಾಧ್ಯತೆಯಿದೆ.ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡಿದರೆ ಸಾಲದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು. ಜತೆಗೆ ಮೀಸಲಾತಿಗೆ ನಿಗದಿ ಮಾಡಿರುವ ಶೇ.50 ರಷ್ಟು ಮಿತಿ ತೆಗೆಯಬೇಕು ಎಂದು ಒತ್ತಾಯಿಸಿ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.